ವಾಷಿಂಗ್ಟನ್(ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಜೋ ಬೈಡನ್ ನಿರ್ಧಾರವನ್ನು ಸ್ವಪಕ್ಷೀಯ ನಾಯಕರು ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ದೇಶ ಹಾಗು ಪಕ್ಷದ ಹಿತಾಸಕ್ತಿಗಾಗಿ ಬೈಡನ್ ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದರು.
ಬೈಡನ್ ಅವರ ನಿರ್ಧಾರವು ದೇಶದ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ. ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅರ್ಹತೆಯೂ ಅವರಿಗಿತ್ತು. ಆದರೆ, ಇಂತಹ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರು ಮಹಾನ್ ದೇಶಭಕ್ತ. ಅಧ್ಯಕ್ಷರಾಗಿ ಬೈಡನ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಮೆರಿಕದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ. ನ್ಯಾಟೋ ಪುನಶ್ಚೇತನಗೊಂಡಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧದ ವಿರುದ್ಧ ಅವರು ವಿಶ್ವದ ರಾಷ್ಟ್ರಗಳನ್ನು ಒಗ್ಗೂಡಿಸಿದರು ಎಂದು ಒಬಾಮಾ ಕೊಂಡಾಡಿದರು.
ಮತ್ತೊಂದೆಡೆ, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ ಎಂದು ಒಬಾಮಾ ಡೆಮಾಕ್ರಟಿಕ್ ಪಕ್ಷದ ಸದಸ್ಯರನ್ನು ಎಚ್ಚರಿಸಿದರು. ನೂತನ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಗೆ ಪಕ್ಷದ ಮುಖಂಡರು ಮುಂದಾಗಲಿದ್ದಾರೆ ಎಂದು ಹೇಳಿದರು.
ಹ್ಯಾರಿಸ್ ಬೆಂಬಲಿಸದ ಒಬಾಮಾ: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಉಮೇದುವಾರಿಕೆಗೆ ಬೈಡನ್ ಬೆಂಬಲ ಘೋಷಿಸಿದ್ದಾರೆ. ಆದರೆ ಈ ಬಗ್ಗೆ ಒಬಾಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೊಸ ಅಭ್ಯರ್ಥಿಯ ಆಯ್ಕೆಗೆ ಸೂಕ್ತ ಪ್ರಕ್ರಿಯೆಗೆ ಅವರು ಕರೆ ನೀಡಿರುವುದು ಚರ್ಚೆಯ ವಿಷಯವಾಗಿದೆ. ಒಬಾಮಾ ಅವರು ಹ್ಯಾರಿಸ್‌ಗೆ ಮಾರ್ಗದರ್ಶಕರಾಗಿದ್ದಾರೆ ಎನ್ನಲಾಗಿದೆ. ಡೆಮಾಕ್ರಟಿಕ್ ಪಕ್ಷದ ಇನ್ನೋರ್ವ ಪ್ರಮುಖ ನಾಯಕಿ ನ್ಯಾನ್ಸಿ ಪೆಲೋಸಿ ಕೂಡಾ ಕಮಲಾ ಹ್ಯಾರಿಸ್ ಬೆಂಬಲಿಸಿಲ್ಲ ಎಂಬುದು ಗಮನಾರ್ಹ.
ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯುವುದರೊಂದಿಗೆ, ಡೆಮಾಕ್ರಟ್‌ಗಳಲ್ಲಿ ಗೊಂದಲ ಉಂಟಾಯಿತು. ಯಾರು ಸ್ಪರ್ಧಿಸುತ್ತಾರೆ ಎಂಬುದೀಗ ಸಸ್ಪೆನ್ಸ್ ಆಗಿದೆ. ಪತ್ರದಲ್ಲಿ ಬೈಡನ್, ಹ್ಯಾರಿಸ್ ಉಮೇದುವಾರಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ನಡೆಯುವ ಪಕ್ಷದ ಸಮಾವೇಶದಲ್ಲಿ ಅಭ್ಯರ್ಥಿಯನ್ನು ನಿರ್ಧರಿಸಲಾಗುತ್ತದೆ. 4,700 ಪ್ರತಿನಿಧಿಗಳು ನಾಮಿನಿಯನ್ನು ಅನುಮೋದಿಸಬೇಕು. ಮತ್ತೆ, ಹ್ಯಾರಿಸ್ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಪ್ರತಿನಿಧಿಗಳ ಬೆಂಬಲ ಸಂಗ್ರಹಿಸಬೇಕಿದೆ. ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ಪತ್ನಿ ಹಿಲರಿ ಕ್ಲಿಂಟನ್ ಈಗಾಗಲೇ ಹ್ಯಾರಿಸ್ ಪರ ನಿಂತಿರುವುದು ಗಮನಾರ್ಹ.
ಇದನ್ನೂ ಓದಿ: 'ಟ್ರಂಪ್ ಸೋಲು ನನ್ನ ಗುರಿ': ಬೈಡನ್ ಹಿಂದೆ ಸರಿದ ಬಳಿಕ ಕಮಲಾ ಹ್ಯಾರಿಸ್ ಮೊದಲ ನುಡಿ - Kamala Harris