ವಾಷಿಂಗ್ಟನ್ ಡಿಸಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಫ್ಲೋರಿಡಾ ಪ್ರತಿನಿಧಿ ಮೈಕ್ ವಾಲ್ಟ್ಜ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾಲ್ಟ್ಜ್ ನಿವೃತ್ತ ಆರ್ಮಿ ಗ್ರೀನ್ ಬೆರೆಟ್ ಆಗಿದ್ದು, ನ್ಯಾಷನಲ್ ಗಾರ್ಡ್‌ನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ವಿಮರ್ಶಕರಾಗಿರುವ ಇವರು, ಈ ಪ್ರದೇಶದಲ್ಲಿ ಸಂಭಾವ್ಯ ಸಂಘರ್ಷಕ್ಕೆ ಯುನೈಟೆಡ್ ಸ್ಟೇಟ್ಸ್ ಸಿದ್ಧವಾಗಬೇಕಾದ ಅಗತ್ಯತೆಯ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುವುದರ ಜೊತೆಗೆ, ಧ್ವನಿ ಎತ್ತಿದವರು.
ಪ್ರಮುಖ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಟ್ರಂಪ್‌ಗೆ ಮಾಹಿತಿ ನೀಡುವ ಮತ್ತು ವಿವಿಧ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.
2021ರಲ್ಲಿ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಸ್ ಕರೆದುಕೊಂಡ ಬೈಡನ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದ ವಾಲ್ಟ್ಜ್, ಟ್ರಂಪ್ ಅವರ ವಿದೇಶಾಂಗ ನೀತಿ ದೃಷ್ಟಿಕೋನಗಳನ್ನು ಸಾರ್ವಜನಿಕವಾಗಿ ಹೊಗಳಿದ್ದರು.
ಟ್ರಂಪ್ ಸೋಮವಾರ ವಿಶ್ವಸಂಸ್ಥೆಯ ಮುಂದಿನ ಯುಎಸ್ ರಾಯಭಾರಿಯಾಗಿ ರಿಪಬ್ಲಿಕನ್ ಪ್ರತಿನಿಧಿ ಎಲಿಸ್ ಸ್ಟೆಫಾನಿಕ್ ಅವರನ್ನು ನಾಮನಿರ್ದೇಶನ ಮಾಡಿದ್ದರು.
ಎಲಿಸ್ ಸ್ಟೆಫಾನಿಕ್ ಅವರು, ನ್ಯೂಯಾರ್ಕ್ನಲ್ಲಿ ಹಿರಿಯ ರಿಪಬ್ಲಿಕನ್ ಆಗಿ, ಹೌಸ್ ರಿಪಬ್ಲಿಕನ್ ಕಾನ್ಫರೆನ್ಸ್ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. 2014ರಲ್ಲಿ ತಮ್ಮ ಮೊದಲ ಚುನಾವಣೆ ಎದುರಿಸಿದ ಸಮಯದಲ್ಲಿ, ಸ್ಟೆಫಾನಿಕ್ ಯುಎಸ್ ಇತಿಹಾಸದಲ್ಲೇ ಕಾಂಗ್ರೆಸ್ಗೆ ಆಯ್ಕೆಯಾದ ಅತ್ಯಂತ ಕಿರಿಯ ಮಹಿಳೆಯಾಗಿದ್ದರು.
ಐತಿಹಾಸಿಕವೆಂಬಂತೆ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ 295 ಮತಗಳನ್ನು ಗಳಿಸಿ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಗೆದ್ದಿದ್ದಾರೆ. 226 ಮತಗಳನ್ನು ಗಳಿಸಿದ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ, ಗದ್ದುಗೆ ಏರಿದ್ದಾರೆ. 1892 ನಂತರ, ಹಿಂದಿನ ಚುನಾವಣೆಯಲ್ಲಿ ಸೋತು, ಮತ್ತೆ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳುತ್ತಿರುವ ಮೊದಲ ಯುಎಸ್ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಟ್ರಂಪ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಟ್ರಂಪ್ ಆಯ್ಕೆ ಎಫೆಕ್ಟ್: ಸೌದಿ ಅರೇಬಿಯಾದಲ್ಲಿ 'ಒಗ್ಗಟ್ಟು' ಪ್ರದರ್ಶಿಸಿದ ಮುಸ್ಲಿಂ ರಾಷ್ಟ್ರಗಳ ನಾಯಕರು