ಪೇಶಾವರ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ಮತ್ತೆ ಪೊಲೀಸರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪೊಲೀಸ್ ಮೊಬೈಲ್ ವ್ಯಾನ್ ಮೇಲೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಉಗ್ರರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ವಜಿರಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ದರಾಜಿಂದಾ ಪ್ರದೇಶದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವ್ಯಾನ್‌ನ ಮೇಲೆ ಅಪರಿಚಿತ ಉಗ್ರರು ಗುಂಡು ಹಾರಿಸಿದ್ದಾರೆ. ಈ ವೇಳೆ ಎಸ್ಎಚ್ಒ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಬಳಿಕ ಪೊಲೀಸರು ಮತ್ತು ದಾಳಿಕೋರರ ನಡುವೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಈ ಬಗ್ಗೆ ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಗಸ್ತು ತಿರುಗುತ್ತಿದ್ದ ವಾಹನದ ಮೇಲೆ ಉಗ್ರರು ಹಠಾತ್ನೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಬಳಿಕ ಒಂದು ಗಂಟೆಗಳ ಕಾಲ ಉಗ್ರರೊಂದಿಗೆ ನಮ್ಮ ಪಡೆ ಗುಂಡಿನ ದಾಳಿ ನಡೆಸಿ ಮೂವರನ್ನು ಹೊಡೆದುರುಳಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರೀ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ಆರಂಭಿಸಲಾಗಿದ್ದು, ದಾಳಿಕೋರರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ವೇಳೆ ಉಗ್ರರ ದಾಳಿ: 5 ಪೊಲೀಸ್ ಸಿಬ್ಬಂದಿ ಸಾವು