ಇಸ್ಲಾಮಾಬಾದ್: ಅಫ್ಘಾನಿಸ್ತಾನದ ತಾಲಿಬಾನ್ ಕಮಾಂಡರ್ ಯಾಹ್ಯಾ ಪಾಕಿಸ್ತಾನದ ಮಿಲಿಟರಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದು, ಪಾಕಿಸ್ತಾನಕ್ಕೆ ನುಗ್ಗಿ ಸೇಡು ತೀರಿಸಿಕೊಳ್ಳುವಂತೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೋರಾಟಗಾರರಿಗೆ ಆತ ಕರೆ ನೀಡಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಿಷೇಧಿತ ತೆಹ್ರೀಕ್ - ಇ - ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನ ಬಣವಾದ ಹಫೀಜ್ ಗುಲ್ ಬಹದ್ದೂರ್ ಉಗ್ರಗಾಮಿ ಗುಂಪಿನ ಭಯೋತ್ಪಾದಕರಿಂದ ತುಂಬಿದ ಸಭೆ ಉದ್ದೇಶಿಸಿ ಯಾಹ್ಯಾ ಮಾತನಾಡುತ್ತಿರುವುದು ಕಂಡು ಬರುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. "ಎಲ್ಲ ಮುಜಾಹಿದ್ದೀನ್ಗಳು ಅಮೀರ್ ಅಲ್ - ಮುಮಿನಿನ್ ಅವರ ಆದೇಶಗಳನ್ನು ಪಾಲಿಸಲು ಸಿದ್ಧರಾಗಿದ್ದಾರೆ ಮತ್ತು ಪಾಕಿಸ್ತಾನದ ವಿರುದ್ಧ ಸಮರ ಸಾರಲು ಬದ್ಧರಾಗಿದ್ದಾರೆ" ಎಂದು ಯಾಹ್ಯಾ ಹೇಳಿದ್ದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಹೇಗೆ ನುಸುಳಬೇಕು ಎಂಬುದರ ಕುರಿತು ಸೂಚನೆ ನೀಡುತ್ತಿರುವುದು ಮತ್ತು ಗಾಯಗೊಂಡ ತಮ್ಮ ಗುಂಪಿನ ಯಾವುದೇ ಹೋರಾಟಗಾರರನ್ನು ವಾಪಸ್ ಕರೆದುಕೊಂಡು ಬರುವ ಬಗ್ಗೆ ಒತ್ತಿ ಹೇಳುವುದು ವಿಡಿಯೋದಲ್ಲಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಅಫ್ಘಾನಿಸ್ತಾನದ ಡಂಗರ್ ಅಲ್ಗಡ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಸೋರಿಕೆಯಾದ ವಿಡಿಯೋದಲ್ಲಿ, ಪಾಕಿಸ್ತಾನ - ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳತ್ತ ದಾಳಿ ನಡೆಸುವ ಯೋಜನೆಯ ಬಗ್ಗೆ ಮಾತನಾಡುವ ಕಮಾಂಡರ್ ಸುತ್ತಲೂ ಭಯೋತ್ಪಾದಕರು ಜಮಾಯಿಸುತ್ತಿರುವುದು ಕಂಡು ಬರುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧವಾಗುವಂತೆ ಯಾಹ್ಯಾ ಉಗ್ರರಿಗೆ ಸೂಚನೆ ನೀಡುತ್ತಿರುವುದು ಕಂಡು ಬರುತ್ತದೆ. ವಿಡಿಯೋದಲ್ಲಿ, ಭಯೋತ್ಪಾದಕರು ಪಾಕಿಸ್ತಾನದ ವಿರುದ್ಧ ಹೋರಾಡಲು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಆತ್ಮಾಹುತಿ ಬಾಂಬರ್ ಸೇರಿದಂತೆ ಸಶಸ್ತ್ರ ಹೋರಾಗಾರರನ್ನು ಉದ್ದೇಶಿಸಿ ಪುಶ್ತೊ ಭಾಷೆಯಲ್ಲಿ ಯಾಹ್ಯಾ ಮಾತನಾಡುತ್ತಿರುವುದನ್ನು ಕಾಣಬಹುದು. ಸಂಭವನೀಯ ದಾಳಿಯ ವಿವರಗಳನ್ನು ಚರ್ಚಿಸುತ್ತಾ, "ಆರು ರಾಕೆಟ್ ಲಾಂಚರ್ಗಳು ಮತ್ತು ಆರು ಸಹಾಯಕರು, ಇಬ್ಬರು ಲೇಸರ್ ಆಪರೇಟರ್ಗಳು ಮತ್ತು ಅವರ ಸಹಾಯಕರು ಮತ್ತು ಸ್ನೈಪರ್ ಇರಲಿದ್ದಾರೆ" ಎಂದು ಆತ ಉಗ್ರರಿಗೆ ಮಾಹಿತಿ ನೀಡುತ್ತಾನೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ತೆಹ್ರೀಕ್ - ಇ - ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) 2007 ರಲ್ಲಿ ರಚನೆ ಆದಾಗಿನಿಂದ ಪಾಕಿಸ್ತಾನದ ಮಾರಕ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದೆ. 2021 ರಲ್ಲಿ ಇಮ್ರಾನ್ ಖಾನ್ ಸರ್ಕಾರದ ಜೊತೆಗಿನ ಶಾಂತಿ ಮಾತುಕತೆಗಳು ಮುರಿದುಬಿದ್ದ ನಂತರ ಅಫ್ಘಾನ್ ತಾಲಿಬಾನ್ನ ಬೆಂಬಲ ಹೊಂದಿರುವ ಈ ಗುಂಪು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿನ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ : ಅಲ್ ಶಿಫಾ ಆಸ್ಪತ್ರೆ ಮೇಲೆ ಮುಂದುವರಿದ ಇಸ್ರೇಲ್ ದಾಳಿ: 140 ಪ್ಯಾಲೆಸ್ಟೈನಿಯರ ಸಾವು - Gaza