ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ ದಿಯಾತಲಾವಾದಲ್ಲಿ ಭಾನುವಾರ ನಡೆದ ಫಾಕ್ಸ್ ಹಿಲ್ ಸೂಪರ್ ಕ್ರಾಸ್ 2024ರ ರೇಸಿಂಗ್ ಸ್ಪರ್ಧೆಯಲ್ಲಿ ಎರಡು ಕಾರ್ಗಳು ಡಿಕ್ಕಿ ಹೊಡೆದ ಪರಿಣಾಮ ಎಂಟು ವರ್ಷದ ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ಮೂಲದ ಮಾಧ್ಯಮ ವರದಿ ಮಾಡಿದೆ.
ಎರಡು ರೇಸ್ ಕಾರುಗಳು ನಿಯಂತ್ರಣ ತಪ್ಪಿ ವೀಕ್ಷಕರ ಗುಂಪಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ಥಲ್ದುವಾ ತಿಳಿಸಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮ ವರದಿಗಳು ತಿಳಿಸಿವೆ.
ಗಾಯಾಳುಗಳನ್ನು ದೀಯತಲಾವ ಮೂಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಗಂಭೀರ ಗಾಯಗೊಂಡ ಮೂವರನ್ನು ಬದುಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಅವಿಸ್ಸಾವೆಲ್ಲಾ, ಮಾತಾರಾ, ಅಕುರೆಸ್ಸಾ ಮತ್ತು ಸೀದುವಾ ಶ್ರೀಲಂಕಾದ ಮೂಲದವರು. ಅಪಘಾತದ ನಂತರ, ಈವೆಂಟ್‌ನಲ್ಲಿನ ಉಳಿದ ರೇಸ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶ್ರೀಲಂಕಾ ಆಟೊಮೊಬೈಲ್ ಸ್ಪೋರ್ಟ್ಸ್ (ಎಸ್‌ಎಲ್‌ಎಎಸ್) ಸಹಯೋಗದಲ್ಲಿ ಶ್ರೀಲಂಕಾ ಮಿಲಿಟರಿ ಅಕಾಡೆಮಿ ದಿಯಾತಲಾವಾ ಆಯೋಜಿಸಿದ್ದ ಫಾಕ್ಸ್ ಹಿಲ್ ಸೂಪರ್ ಕ್ರಾಸ್‌ನ 28ನೇ ಆವೃತ್ತಿ ಭಾನುವಾರದಂದು ದಿಯಾತಲಾವಾದಲ್ಲಿ ಆರಂಭವಾಯಿತು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮಳೆ ಅಬ್ಬರಕ್ಕೆ 87 ಮಂದಿ ಸಾವು, 80ಕ್ಕೂ ಹೆಚ್ಚು ಜನರಿಗೆ ಗಾಯ - Heavy rain in Pakistan