ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ದಕ್ಷಿಣ ಕರಾವಳಿಯ ಜಾರ್ಜ್ ನಗರದಲ್ಲಿ ಅಪಾಟ್ಮೆಂಟ್ ಕಟ್ಟಡದ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಕಾಲ ನಡೆದ ರಕ್ಷಣಾ ಕಾರ್ಯ ಶುಕ್ರವಾರ ಅಂತ್ಯವಾಗಿದೆ. ಇದುವರೆಗೆ 33 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಲ್ಲಿನ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಅಪಾಟ್ಮೆಂಟ್ ಕಟ್ಟಡ ಮೇ 6ರಂದು ಕುಸಿದು ಬಿದ್ದಿತ್ತು. ಕಟ್ಟಡದ ಅವಶೇಷಗಳಲ್ಲಿ ಸಿಲುಕಿ, ನಾಪತ್ತೆಯಾದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಸುಮಾರು ಎರಡು ವಾರಗಳ ನಂತರ ರಕ್ಷಣಾ ಕಾರ್ಯಾ ಕೊನೆಗೊಂಡಿದೆ. ಮೃತರು, ರಕ್ಷಣೆ ಮಾಡಲಾದ ಕಾರ್ಮಿಕರು ಸೇರಿ ಕಾರ್ಯಾಚರಣೆ ಬಗ್ಗೆ ಶುಕ್ರವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಕಟ್ಟಡದಲ್ಲಿ ಯಾರೂ ಕಾಣೆಯಾಗಿಲ್ಲ ಎಂದು ಹೇಳಿದ್ದಾರೆ.
33 ಮಂದಿ ಸಾವು, 29 ಜನರ ರಕ್ಷಣೆ: ಅಂದು ಕಟ್ಟಡವು ಕುಸಿದಾಗ ಒಟ್ಟು 62 ನಿರ್ಮಾಣ ಕಾರ್ಮಿಕರು ಸ್ಥಳದಲ್ಲಿದ್ದರು. ಈ ಪೈಕಿ 33 ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ 27 ಪುರುಷರು ಮತ್ತು ಆರು ಜನ ಮಹಿಳೆಯರು ಸೇರಿದ್ದಾರೆ. ಉಳಿದಂತೆ 29 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದರಲ್ಲಿ ಐವರು ಸಂತ್ರಸ್ತರನ್ನು ಜೀವಂತವಾಗಿ ಕಟ್ಟಡದಿಂದ ಹೊರತೆಗೆಯಲಾಗಿತ್ತು. ಆದರೆ, ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಹತ್ತು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಕಾರ್ಮಿಕರು ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮಲಾವಿಯಿಂದ ಬಂದ ವಿದೇಶಿ ಪ್ರಜೆಗಳಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
250 ಗಂಟೆ ನಡೆದ ರಕ್ಷಣೆ ಕಾರ್ಯ: ಜೀವಂತವಾಗಿ ಪತ್ತೆ ಈ ದುರಂತವು ದಕ್ಷಿಣ ಆಫ್ರಿಕಾದ ಅತ್ಯಂತ ಕೆಟ್ಟ ಕಟ್ಟಡ ಕುಸಿತಗಳಲ್ಲಿ ಒಂದಾಗಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಗುರುವಾರ ಸ್ಥಳಕ್ಕೆ ತೆರಳಿ ಸಂತ್ರಸ್ತರ ಕುಟುಂಬಗಳು, ರಕ್ಷಣಾ ಸಿಬ್ಬಂದಿಯನ್ನು ಭೇಟಿ ಮಾಡಿದರು. 1,000ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ 250 ಗಂಟೆಗಳಿಗೂ ಹೆಚ್ಚು ಕಾಲ ಸ್ಥಳದಲ್ಲಿದ್ದು, ರಾತ್ರಿ ಮತ್ತು ಹಗಲು ಪಾಳಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
6 ದಿನದ ಬಳಿಕ ಜೀವಂತವಾಗಿ ವ್ಯಕ್ತಿ ಪತ್ತೆ: ಈ ವೇಳೆ, ಆಹಾರ ಮತ್ತು ನೀರಿಲ್ಲದೇ ಆರು ದಿನಗಳ ಕಾಲ ಅವಶೇಷಗಳಲ್ಲಿ ಸಿಕ್ಕಿಬಿದ್ದಿದ್ದ ವ್ಯಕ್ತಿಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ. ಪವಾಡ ಎಂಬಂತೆ ಅವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಒಟ್ಟಾರೆ ಘಟನೆ ಬಗ್ಗೆ ಪೊಲೀಸರು ಮತ್ತು ಪ್ರಾಂತೀಯ ವೆಸ್ಟರ್ನ್ ಕೇಪ್ ಸರ್ಕಾರ ಸೇರಿದಂತೆ ಹಲವು ಸಂಸ್ಥೆಗಳು ತನಿಖೆ ನಡೆಸಲಿವೆ. ಇದೊಂದು ವಿನಾಶಕಾರಿ ದುರಂತ ಎಂದು ಪ್ರಾಂತೀಯ ಸರ್ಕಾರದ ಮುಖ್ಯಸ್ಥ ವೆಸ್ಟರ್ನ್ ಕೇಪ್ ಪ್ರೀಮಿಯರ್ ಅಲನ್ ವಿಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಟ್ಟಡ ಕುಸಿತ ಪ್ರಕರಣ: ಅವಶೇಷಗಳಡಿ ಸಿಲುಕಿ 6 ದಿನಗಳ ಬಳಿಕ ಹೊರಬಂದ ಕಾರ್ಮಿಕ!