ಸಿಂಗಾಪುರ್: ಸಿಂಗಾಪುರದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಬೆದರಿಕೆ ಬಂದ ಬಳಿಕ ಮಂಗಳವಾರ ರಾತ್ರಿ ಮುಂಜಾಗ್ರತಾ ಕ್ರಮವಾಗಿ ವಿಮಾನಕ್ಕೆ ಬೆಂಗಾವಲಾಗಿ ಸಿಂಗಾಪುರ ವಾಯುಪಡೆ ಎಫ್- 15ಎಸ್ಜಿ ಜೆಟ್ ನಿಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಲ್ಲಿನ ರಕ್ಷಣಾ ಸಚಿವ ಎನ್ಜಿ ಇಂಗ್ ಹೆನ್, ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಆರ್ಎಸ್ಎಎಫ್ನ ಎರಡು ಯುದ್ಧ ವಿಮಾನಗಳನ್ನು ಅದರ ಬೆಂಗಾವಲಾಗಿ ನಿಯೋಜಿಸಲಾಗಿದೆ. ಅಂತಿಮವಾಗಿ ಇಂದು ರಾತ್ರಿ ಸುಮಾರು 10:04 ಗಂಟೆಗೆ ಸಿಂಗಪುರ್ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿಸಿದ್ದಾರೆ.
ಈ ವೇಳೆ, ನಮ್ಮ ಭೂ ಆಧಾರಿತ ವಾಯು ರಕ್ಷಣಾ ವ್ಯವಸ್ಥೆ ಮತ್ತು ಎಕ್ಸ್ಪ್ಲೊಸಿವ್ ಒರ್ಡನ್ಸ್ ಡಿಸ್ಪೋಸಲ್ ಕೂಡ ಸಕ್ರಿಯಗೊಳಿಸಲಾಗಿದೆ. ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ವಿಮಾನವನ್ನು ಏರ್ಪೋರ್ಟ್ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗುವುದು. ಸದ್ಯ ತನಿಖೆ ಮುಂದುವರೆದಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವಿಮಾನದ ಸುರಕ್ಷಿತ ಲ್ಯಾಂಡಿಂಗ್ನಲ್ಲಿ ಭಾಗಿಯಾದ ಸಿಂಗಾಪುರ್ ಸೇನಾ ಬಲ ಮತ್ತು ಗೃಹ ತಂಡದ ಸಮರ್ಪಣಾ ಕಾರ್ಯಕ್ಕೆ ಅವರು ಶ್ಲಾಘನೆ ವ್ಯಕ್ತಡಿಸಿದ್ದಾರೆ. ಸಿಂಗಾಪೂರ್ ಸೇನಾ ಬಲ ಮತ್ತು ಗೃಹ ತಂಡದ ವೃತ್ತಿಪರತೆ ಮತ್ತು ಸಮರ್ಪಣೆಗೆ ಧನ್ಯವಾದಗಳು. ಬೆದರಿಕೆ ನಡುವೆ ಸುರಕ್ಷಿತವಾಗಿ ವಿಮಾನವನ್ನು ನಮ್ಮ ನೆಲಕ್ಕೆ ಕರೆ ತಂದಿದ್ದಕ್ಕೆ ಕೃತಜ್ಞತೆಗಳು ಎಂದಿದ್ದಾರೆ.
ಮಂಗಳವಾರ ರಾತ್ರಿ 8.25 (ಸ್ಥಳೀಯ ಸಮಯ) ಸುಮಾರಿಗೆ ಬಾಂಬ್ ಬೆದರಿಕೆ ಕುರಿತು ಎಚ್ಚರಿಕೆ ನೀಡಲಾಯಿತು. ರಾತ್ರಿ 10.04ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಚಾಂಗಿ ವಿಮಾನ ನಿಲ್ದಾದಲ್ಲಿ ಇಳಿದಿದೆ. ಈ ವೇಳೆ, ವಿಮಾನ ಹಾರಾಟದ ಮಾರ್ಗದಲ್ಲಿ ಆರ್ಎಸ್ಎಎಫ್ ಯುದ್ದ ವಿಮಾನಗಳು ಬೆಂಗಾವಲಾಗಿ ನಿಯೋಜಿಸಲಾಗಿತ್ತು ಎಂದು ಸಿಂಗಾಪುರ್ ಪೊಲೀಸ್ ದಳ ಸಿಎನ್ಎಗೆ ತಿಳಿಸಿದೆ.
ವಿಮಾನ ಲ್ಯಾಂಡ್ ಆದ ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು, ಯಾವುದೇ ಬೆದರಿಕೆ ಕಂಡು ಬಂದಿಲ್ಲ. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಜ್ಬುಲ್ಲಾದ ಹಿರಿಯ ಯುಎವಿ ಕಮಾಂಡರ್ ಸಾವು: ಖಚಿತಪಡಿಸಿದ ಇಸ್ರೇಲಿ ರಕ್ಷಣಾ ಪಡೆ