ಇಸ್ಲಾಮಾಬಾದ್ : ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ (ಎಂಬಿಎಸ್) ಅವರ ಬಹುನಿರೀಕ್ಷಿತ ಪಾಕಿಸ್ತಾನ ಭೇಟಿಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಕಳೆದ ಕೆಲ ವಾರಗಳಿಂದ ಸೌದಿ ರಾಜಕುಮಾರನ ಉನ್ನತ ಮಟ್ಟದ ಭೇಟಿಗೆ ಪಾಕಿಸ್ತಾನ ತಯಾರಿ ನಡೆಸುತ್ತಿದೆ. ಆದಾಗ್ಯೂ ಅವರ ಭೇಟಿ ಮತ್ತೊಮ್ಮೆ ಮುಂದೂಲ್ಪಟ್ಟಿರುವುದು ಏಕೆ ಎಂಬ ಬಗ್ಗೆ ಪಾಕಿಸ್ತಾನ ನಿಗೂಢ ಮೌನ ಕಾಯ್ದುಕೊಂಡಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ನಿರ್ಮಾಣವಾಗಿರುವ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸೌದಿ ರಾಜಕುಮಾರ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಪಾಕಿಸ್ತಾನದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೌದಿ ರಾಜಕುಮಾರ ಬಹಳಷ್ಟು ಅಸಮಾಧಾನಗೊಂಡಿದ್ದು, ವಿಶೇಷವಾಗಿ ದೇಶದ ಆಂತರಿಕ ವಿಷಯಗಳಲ್ಲಿ ಸೌದಿ ಅರೇಬಿಯಾವನ್ನು ಎಳೆದು ತರುವ ಕೆಲ ನಾಯಕರ ಇತ್ತೀಚಿನ ಹೇಳಿಕೆಗಳು ಕೂಡ ಇದಕ್ಕೆ ಕಾರಣವಾಗಿವೆ.
ಪಾಕಿಸ್ತಾನದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದಿರುವುದರ ಹಿಂದೆ 'ಸೌದಿ ಪ್ರಭಾವ' ಇದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಶೇರ್ ಅಫ್ಜಲ್ ಮಾರ್ವತ್ ಇತ್ತೀಚೆಗೆ ಆರೋಪಿಸಿದ್ದರು. ರಾವಲ್ಪಿಂಡಿಯ ಅಡಿಯಾಲಾ ಜೈಲಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ವತ್, "ನನ್ನನ್ನು ಪಿಎಸಿ ಅಧ್ಯಕ್ಷರಾಗಿ ನೇಮಿಸಲು ಸೌದಿ ರಾಯಭಾರಿ ಒಪ್ಪುತ್ತಿಲ್ಲ ಎಂದು ಶಿಬ್ಲಿ ಫರಾಜ್ ಜೈಲಿನಲ್ಲಿ ಇಮ್ರಾನ್ ಖಾನ್ ಅವರಿಗೆ ತಿಳಿಸಿದ್ದಾರೆ" ಎಂದು ಹೇಳಿದರು.
ಇಮ್ರಾನ್ ಖಾನ್ ಅವರ ಸರ್ಕಾರವನ್ನು ಪದಚ್ಯುತಗೊಳಿಸಲು ಯುನೈಟೆಡ್ ಸ್ಟೇಟ್ಸ್ ನಡೆಸಿದ ಆಡಳಿತ ಬದಲಾವಣೆ ಕಾರ್ಯಾಚರಣೆಗೆ ಸೌದಿ ಅರೇಬಿಯಾ ಒಂದು ಅಸ್ತ್ರವಾಗಿತ್ತು ಎಂದು ಮಾರ್ವತ್ ಕಳೆದ ತಿಂಗಳು ಆರೋಪಿಸಿದ್ದರು. ಇಮ್ರಾನ್ ಖಾನ್ ಸರ್ಕಾರದ ಪದಚ್ಯುತಿಯ ನಂತರ ಮಾರ್ವತ್ ಪಿಟಿಐ ತನ್ನ ಪ್ರಮುಖ ಮತ್ತು ರಾಜಕೀಯ ಸಮಿತಿಯಿಂದ ತೆಗೆದುಹಾಕಿತ್ತು ಮತ್ತು ಸೌದಿ ಅರೇಬಿಯಾದೊಂದಿಗಿನ ಸಂಬಂಧಗಳನ್ನು ಹಾನಿಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಶೋಕಾಸ್ ನೋಟಿಸ್ ನೀಡಿತ್ತು.
ಮತ್ತೊಂದೆಡೆ ಎಂಬಿಎಸ್ ತಮ್ಮ ಪಾಕಿಸ್ತಾನ ಭೇಟಿಯನ್ನು ಅಂತಿಮಗೊಳಿಸುವ ಮೊದಲು ಎರಡೂ ದೇಶಗಳ ಮಧ್ಯದ ಕೆಲ ಆರ್ಥಿಕ ಸಂಬಂಧಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯಬೇಕಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸೌದಿ ಹೂಡಿಕೆದಾರರು ಮತ್ತು ಉದ್ಯಮಿಗಳು ಹಲವಾರು ಯೋಜನೆಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡಿರುವ ಸರ್ಕಾರ, ವ್ಯಾಪಾರ ಒಪ್ಪಂದದ ಕೆಲ ನಿಯಮಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದೆ.
ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನೀಡಿದ ಆಹ್ವಾನವನ್ನು ಎಂಬಿಎಸ್ ಸ್ವೀಕರಿಸಿದ್ದಾರೆ. ಹೀಗಾಗಿ ಅವರ ಭೇಟಿಯು ಮತ್ತೆ ಮುಂದೂಡಿಕೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಶ್ರಮಿಸುತ್ತಿದೆ ಹಾಗೂ ಆ ಮೂಲಕ ಸೌದಿಯಿಂದ ಮತ್ತಷ್ಟು ಹೂಡಿಕೆಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.
ಭೇಟಿಯ ಪರಿಷ್ಕೃತ ವೇಳಾಪಟ್ಟಿಯನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರೂ, ಹಜ್ ಮತ್ತು ಈದ್-ಉಲ್-ಅಝಾ ರಜಾದಿನಗಳ ನಂತರ ಜೂನ್ ಮೂರನೇ ವಾರದಲ್ಲಿ ಎಂಬಿಎಸ್ ಪಾಕಿಸ್ತಾನಕ್ಕೆ ಭೇಟಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : 'ಯಾಹ್ಯಾ ಸಿನ್ವರ್ ಅಡಗುತಾಣದ ಮಾಹಿತಿ ಕೊಡ್ತೀವಿ, ರಫಾ ಮೇಲಿನ ಯುದ್ಧ ನಿಲ್ಲಿಸಿ' ಇಸ್ರೇಲ್ಗೆ ಯುಎಸ್ ಆಫರ್ - Yahya Sinwar