ವಾಷಿಂಗ್ಟನ್(ಅಮೆರಿಕ): ರಷ್ಯಾ ದೇಶವು ರಹಸ್ಯವಾಗಿ ಪ್ರಮುಖ ಅಸ್ತ್ರವೊಂದನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಮಾಹಿತಿ ಹೊಂದಿರುವುದಾಗಿ ಬೈಡೆನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇಂಟೆಲಿಜೆನ್ಸ್ ಸಮಿತಿಯ ಅಧ್ಯಕ್ಷ ಮೈಕ್ ಟರ್ನರ್ ಬುಧವಾರ ಅಧ್ಯಕ್ಷ ಬೈಡನ್ ಅವರ ಆಡಳಿತವು ಈ ಬಗ್ಗೆ ಸತ್ಯ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಅದರಿಂದಾಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ತಿಳಿಸುವಂತೆಯೂ ಅವರು ಕೇಳಿಕೊಂಡರು.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಮಾತನಾಡಿ, ರಷ್ಯಾ ಉಪಗ್ರಹವು ಕ್ಷಿಪಣಿ ವಿರೋಧಿ ಸಾಮರ್ಥ್ಯ ಪಡೆದುಕೊಂಡಿದೆ ಎಂದು ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಇದೆ. ಈ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚಿಸಲಾಗುತ್ತಿದೆ. ತಕ್ಷಣಕ್ಕೆ ಯಾವುದೇ ಅಪಾಯ ಇಲ್ಲದಿದ್ದರೂ ಭೂಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಅಪಾಯವಿದೆ. ಕೆಳ ಕಕ್ಷೆಯಲ್ಲಿರುವ ಗಗನಯಾತ್ರಿಗಳಿಗೂ ಇದು ಅಪಾಯಕಾರಿ. ಆಯುಧವು ಬಾಹ್ಯಾಕಾಶದಿಂದ ಭೂಮಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗದು ಅಂತಾ ಕಿರ್ಬಿ ತಿಳಿಸಿದರು.
ಕೆಲವು ತಿಂಗಳ ಹಿಂದೆ ರಷ್ಯಾ ತನ್ನ ಕ್ಷಿಪಣಿ ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಈ ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ ಎಂಬ ವರದಿಗಳನ್ನು ಇದೇ ವೇಳೆ ಕಿರ್ಬಿ ತಳ್ಳಿ ಹಾಕಿದರು. ರಷ್ಯಾ ತಯಾರಿಸುತ್ತಿರುವ ಆಯುಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬೈಡನ್‌ಗೆ ತಿಳಿಸಲಾಗಿದೆ. ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಆದೇಶಿಸಿದ್ದಾರೆ. ರಷ್ಯಾದೊಂದಿಗೂ ನೇರವಾಗಿ ಚರ್ಚಿಸಲು ಅಧ್ಯಕ್ಷ ಬೈಡನ್ ನಮಗೆ ಸೂಚಿಸಿದ್ದಾರೆ ಎಂದು ಕಿರ್ಬಿ ವಿವರಿಸಿದರು.
ಮತ್ತೊಂದೆಡೆ, ರಷ್ಯಾ ನಿರ್ಮಿತ ಹೊಸ ಶಸ್ತ್ರಾಸ್ತ್ರದಿಂದ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಅದು ಸಕ್ರಿಯವಾಗಿಲ್ಲ. ರಷ್ಯಾ ಇನ್ನೂ ಆ ಶಸ್ತ್ರಾಸ್ತ್ರವನ್ನು ನಿಯೋಜಿಸಿಲ್ಲ ಎಂದು ಪೆಂಟಗನ್ ಪ್ರೆಸ್ ಸೆಕ್ರೆಟರಿ ಮೇಜರ್ ಜನರಲ್ ಪ್ಯಾಟ್ ರೈಡರ್ ಬಹಿರಂಗಪಡಿಸಿದರು. ಇದು ಉಪಗ್ರಹ ವಿರೋಧಿ ಕ್ಷಿಪಣಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಮಾಸ್ಕೋ ಪರಮಾಣು ಸಾಮರ್ಥ್ಯದ ಅಸ್ತ್ರವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದರೆ ಅದು ತುಂಬಾ ಅಪಾಯಕಾರಿ. ಕಡಿಮೆ ಭೂಮಿಯ ಕಕ್ಷೆಯಲ್ಲಿ ಪರಮಾಣು ಉಡಾವಣೆಯಿಂದ ಎಲ್ಲಾ ಉಪಗ್ರಹಗಳು ಹಾನಿಗೊಳಗಾಗುತ್ತವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲೂ ಪರಿಣಾಮ ಬೀರಲಿದೆ. ಅದರಲ್ಲಿ ಗಗನಯಾತ್ರಿಗಳಿಗೆ ಅಪಾಯ ತಪ್ಪಿದ್ದಲ್ಲ. ರೋಡಸಿಯಲ್ಲಿ ಸಂಪೂರ್ಣ ಅಸ್ತವ್ಯಸ್ತ ಉಂಟಾಗಲಿದೆ ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಬಾಹ್ಯಾಕಾಶ ಮತ್ತು ರಕ್ಷಣಾ ಬಜೆಟ್ ಪರಿಣಿತ ಟಾಡ್ ಹ್ಯಾರಿಸನ್ ಕಳವಳ ವ್ಯಕ್ತಪಡಿಸಿದರು.
ಆರೋಪ ತಿರಸ್ಕರಿಸಿದ ರಷ್ಯಾ: ಮತ್ತೊಂದೆಡೆ, ಅಮೆರಿಕ ಗಂಭೀರ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. ಉಕ್ರೇನ್‌ಗೆ ನೆರವು ನೀಡಲು ಕಾಂಗ್ರೆಸ್‌ನ ಬೆಂಬಲ ಪಡೆಯಲು ಅಮೆರಿಕ ಸರ್ಕಾರವು ಈ ಉಪಾಯ ಮಾಡಿದೆ ಎಂದು ರಷ್ಯಾ ಹೇಳಿದೆ. ಒಂದು ವೇಳೆ ರಷ್ಯಾ ನಿಜವಾಗಿಯೂ ವಿನಾಶಕಾರಿ ಕ್ಷಿಪಣಿಯನ್ನು ಹೊಂದಿದ್ದರೆ ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ. ರಷ್ಯಾ ಸೇರಿದಂತೆ 130ಕ್ಕೂ ಹೆಚ್ಚು ದೇಶಗಳು ಬಾಹ್ಯಾಕಾಶ ಒಪ್ಪಂದಕ್ಕೆ ಸಹಿ ಹಾಕಿರುವುದು ಗಮನಾರ್ಹ.
ಇದನ್ನೂ ಓದಿ: ಪೋರ್ನ್ಸ್ಟಾರ್ಗೆ ಹಣ ನೀಡಿದ ಆರೋಪ: ಟ್ರಂಪ್ ಮನವಿ ತಿರಸ್ಕರಿಸಿ, ವಿಚಾರಣೆಗೆ ದಿನಾಂಕ ನಿಗದಿ ಮಾಡಿದ ಕೋರ್ಟ್