ಕೀವ್ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ಮುಂದುವರಿದಿದ್ದು, ಉಭಯ ರಾಷ್ಟ್ರಗಳು ಕ್ಷಿಪಣಿ, ರಾಕೆಟ್, ಡ್ರೋನ್ ದಾಳಿಯನ್ನು ಮುಂದುವರಿಸಿವೆ. ಉಕ್ರೇನ್ ಹಾರಿಬಿಟ್ಟ 100 ಕ್ಕೂ ಅಧಿಕ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇದು 2022 ರಲ್ಲಿ ಯುದ್ಧ ಆರಂಭವಾದಾಗಿನಿಂದ ಅತಿದೊಡ್ಡ ದಾಳಿಯಾಗಿದೆ ಎಂದು ರಷ್ಯಾ ಹೇಳಿದೆ.
ಏಳು ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಡೀ 125 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ವೋಲ್ಗೊಗ್ರಾಡ್‌ನ ನೈಋತ್ಯ ಪ್ರದೇಶವು ವಿಶೇಷವಾಗಿ ಭಾರೀ ಬೆಂಕಿಗೆ ತುತ್ತಾಯಿತು. 67 ಉಕ್ರೇನ್ ಡ್ರೋನ್‌ಗಳು ರಷ್ಯಾದ ವಾಯು ರಕ್ಷಣೆಯನ್ನು ಭೇದಿಸಿಕೊಂಡು ಬಂದಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾದ ವೊರೊನೆಜ್ ಪ್ರದೇಶದ ಮೇಲೆ ಹದಿನೇಳು ಡ್ರೋನ್‌ಗಳು ಹಾರಿ ಬಂದಿವೆ. ಅವುಗಳನ್ನು ಹೊಡೆರುಳಿಸಿದ ಬಳಿಕ ಅವುಗಳ ಅವಶೇಷಗಳು ಅಪಾರ್ಟ್‌ಮೆಂಟ್ ಮತ್ತು ಖಾಸಗಿ ಮನೆಗಳ ಮೇಲೆ ಬಿದ್ದು ಹಾನಿ ಮಾಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಹುಮಹಡಿ ಕಟ್ಟಡದ ಮೇಲೆ ಜ್ವಾಲೆ ಹೊತ್ತಿಕೊಂಡಿರುವ ವಿಡಿಯೋಗಳು ವೈರಲ್ ಆಗಿವೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದ ಗವರ್ನರ್ ಅಲೆಕ್ಸಾಂಡರ್ ಗುಸೆವ್ ಹೇಳಿದ್ದಾರೆ.
ರಷ್ಯಾದ ರೋಸ್ಟೋವ್ ಪ್ರದೇಶದ ಮೇಲೆ 18 ಡ್ರೋನ್‌ಗಳು ಹಾರಿ ಬಂದಿದ್ದು, ವರದಿಯಾಗಿದೆ. ಅಲ್ಲಿ ಬಿದ್ದ ಅವಶೇಷಗಳು ಕಾಳ್ಗಿಚ್ಚನ್ನು ಹುಟ್ಟುಹಾಕಿತ್ತು ಎಂದು ಗವರ್ನರ್ ವಾಸಿಲಿ ಗೊಲುಬೆವ್ ಹೇಳಿದ್ದಾರೆ. ಬೆಂಕಿಯು ಜನವಸತಿ ಪ್ರದೇಶಗಳಿಗೆ ಅಪಾಯ ಉಂಟು ಮಾಡಿಲ್ಲ. ಆದರೆ 20 ಹೆಕ್ಟೇರ್ (49.4 ಎಕರೆ) ಅರಣ್ಯವನ್ನು ಆವರಿಸಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
16 ಉಕ್ರೇನಿಯನ್ನರಿಗೆ ಗಾಯ: ರಷ್ಯಾವು ದಕ್ಷಿಣ ಭಾಗದಲ್ಲಿ ಸೇನಾ ಆಕ್ರಮಣಕ್ಕೆ ತಯಾರಿ ನಡೆಸಬಹುದು ಎಂದು ಉಕ್ರೇನ್ ಸೇನೆ ಅಂದಾಜಿಸಿದ ಬೆನ್ನಲ್ಲೇ, ದಾಳಿ ನಡೆದಿದೆ. ಇದರಿಂದ ಝಪೊರಿಝಿಯಾ ನಗರದಲ್ಲಿ ಶನಿವಾರ ರಾತ್ರಿಯ ದಾಳಿಯಲ್ಲಿ 16 ನಾಗರಿಕರು ಗಾಯಗೊಂಡಿದ್ದಾರೆ.
ನಗರವು ರಷ್ಯಾದ ಬಾಂಬ್‌ಗಳಿಂದ 10 ಪ್ರತ್ಯೇಕ ದಾಳಿಗೆ ತುತ್ತಾಯಿತು. ಬಹುಮಹಡಿ ಕಟ್ಟಡ ಮತ್ತು ವಸತಿ ಮನೆಗಳಿಗೆ ಹಾನಿ ಉಂಟಾಗಿದೆ. ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಗವರ್ನರ್ ಇವಾನ್ ಫೆಡೋರೊವ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ: ಇಬ್ಬರು ಹಿರಿಯ ನಾಯಕರು ಸೇರಿ 37 ಐಎಸ್ ಉಗ್ರರು ಹತ - US Airstrikes On Syria