ನವದೆಹಲಿ: ದಕ್ಷಿಣ ಗಾಜಾದ ರಫಾ ಮೇಲೆ ನಡೆಯುತ್ತಿರುವ ದಾಳಿಯಿಂದಾಗಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಮಂದಿ ನಗರ ತೊರೆದಿದ್ದಾರೆ. ಈ ನಡುವೆ ಬದುಕುಳಿದರ ಸ್ಥಿತಿ ಶೋಚನೀಯವಾಗಿದೆ. ನಿರಂತರ ದಾಳಿಗೆ ಒಳಗಾಗುತ್ತಿರುವ ರಫಾದಲ್ಲಿ ಅಪಾರ ಸಾವು-ನೋವು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ಕ್ರಾಸ್ ಇಲ್ಲಿ 60 ಹಾಸಿಗೆಯ ಫೀಲ್ಡ್ ಆಸ್ಪತ್ರೆ ತೆರೆಯುವುದಾಗಿ ಘೋಷಿಸಿದೆ.
ಈ ಕುರಿತು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಗಾಜಾದಲ್ಲಿ ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ಯಾಲೆಸ್ಟೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಕೆಲಸ ಮಾಡುತ್ತದೆ. ಇದನ್ನು ಬೆಂಬಲಿಸುವ ಗುರಿಯನ್ನು ಫೀಲ್ಡ್ ಆಸ್ಪತ್ರೆ ಹೊಂದಿದೆ ಎಂದು ತಿಳಿಸಿದೆ.
ಆಸ್ಪತ್ರೆಯ ತಂಡದಲ್ಲಿ ಸುಮಾರು 30 ವೈದ್ಯಕೀಯ ಕಾರ್ಯಕರ್ತರು, ತುರ್ತು ಶಸ್ತ್ರ ಚಿಕಿತ್ಸಕರು, ತಾಯಿ ಮತ್ತು ಮಕ್ಕಳ ಆರೋಗ್ಯ ಆರೈಕೆ, ನವಜಾತ ಶಿಶುಗಳ ಆರೈಕೆ, ಮಕ್ಕಳ ಸೇವೆಗಳು ಮತ್ತು ಹೊರರೋಗಿ ಚಿಕಿತ್ಸಾಲಯ ಇರಲಿದೆ. ಇದರ ಜೊತೆಗೆ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ತಂಡವಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಐಸಿಆರ್ಸಿನ ಈ ಫೀಲ್ಡ್ ಆಸ್ಪತ್ರೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿಗಳ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರತಿದಿನ ಸುಮಾರು 200 ಜನರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ.
ಆಸ್ಪತ್ರೆಯ ಹಾಸಿಗೆಯ ಮೇಲೆ ಯಾವುದೇ ರೋಗಿಯನ್ನು ಕೊಲ್ಲಬಾರದು ಮತ್ತು ಇತರರನ್ನು ಉಳಿಸಲು ಕೆಲಸ ಮಾಡುವಾಗ ಯಾವುದೇ ವೈದ್ಯರು, ನರ್ಸ್ ಅಥವಾ ಯಾವುದೇ ವೈದ್ಯಕೀಯ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಳ್ಳಬಾರದು ಎಂದು ಐಸಿಆರ್ಸಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಜಾದ 39 ಆಸ್ಪತ್ರೆಗಳು 23 ಸೇವೆಗಳಿಂದ ಹೊರಗುಳಿದಿವೆ. ಆರೋಗ್ಯ ಸೇವೆಯ ಬೇಡಿಕೆಗಳು ಮತ್ತು ಕಡಿಮೆ ಆರೋಗ್ಯ ಸೌಲಭ್ಯಗಳಿಂದಾಗಿ ಅಗತ್ಯ ತುರ್ತು ಸೇವೆ ಪಡೆಯಲು ಜನರು ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೆಡ್ಕ್ರಾಸ್ನ ವೈದ್ಯರು ಮತ್ತು ದಾದಿಯರು ಅವರ ಸಾಮರ್ಥ್ಯ, ಮಿತಿ ಮೀರಿ ಕಾರ್ಯ ನಿರ್ವಹಿಸಲಿದ್ದಾರೆ.
ಐಸಿಆರ್ಸಿ ಕುರಿತು: ಎರಡನೇ ವಿಶ್ವಯುದ್ದದ ಬಳಿಕ ಜಿನೀವಾ ಒಪ್ಪಂದದ ಭಾಗವಾಗಿ 1949ರಲ್ಲಿ ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆ ಸ್ಥಾಪಿಸಲಾಗಿದೆ. ಇದರ ಮುಖ್ಯ ಉದ್ದೇಶ ಯುದ್ಧ ಕಾಲದಲ್ಲಿ ಗಾಯಗೊಂಡ ಸೈನಿಕರು ಮತ್ತು ಜನರಿಗೆ ಅಗತ್ಯ ವೈದ್ಯಕೀಯ ರಕ್ಷಣೆ ನೀಡುವುದಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಯಾಹ್ಯಾ ಸಿನ್ವರ್ ಅಡಗುತಾಣದ ಮಾಹಿತಿ ಕೊಡ್ತೀವಿ, ರಫಾ ಮೇಲಿನ ಯುದ್ಧ ನಿಲ್ಲಿಸಿ' ಇಸ್ರೇಲ್ಗೆ ಯುಎಸ್ ಆಫರ್