ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಸಂಜೆ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲಿದ್ದಾರೆ. ದೇಶದಾದ್ಯಂತದ ಹೆಚ್ಚಿನ ಸಂಖ್ಯೆಯ ಭಾರತೀಯ-ಅಮೆರಿಕನ್ನರು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಡನ್ ಅವರಿಗೆ ಇದು ಅಧ್ಯಕ್ಷರಾಗಿ ಕೊನೆಯ ದೀಪಾವಳಿ ಆಗಲಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ದಿನವು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ ನೀಡುವ ಸ್ಮರಣೀಯ ಗೌರವವಾಗಿದೆ. ಅಮೆರಿಕ ಮತ್ತು ಭಾರತೀಯ - ಅಮೆರಿಕನ್ ಸಮುದಾಯದ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಇದು ಒತ್ತಿಹೇಳುತ್ತದೆ ಎಂದು ಶ್ವೇತಭವನ ನೆನಪಿಸಿಕೊಂಡಿದೆ.
ಹಿಂದಿನ ವರ್ಷಗಳ ಸಂಪ್ರದಾಯವನ್ನು ಮುಂದುವರಿಸಲಾಗುತ್ತಿದೆ. ಅಧ್ಯಕ್ಷರು ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ. ದೀಪ ಬೆಳಗಿದ ಬಳಿಕ ಅವರು, ಭಾರತೀಯ-ಅಮೆರಿಕನ್ನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಶ್ವೇತಭವನದಲ್ಲಿ ಇದು ಅಧ್ಯಕ್ಷ ಬೈಡನ್ ಅವರ ಕೊನೆಯ ದೀಪಾವಳಿ ಆಚರಣೆ ಆಗಲಿದೆ.
ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಅವರ ವಿಡಿಯೋ ಸಂದೇಶ ಕೂಡಾ ಶ್ವೇತಭವನದಲ್ಲಿ ಇಂದು ಪ್ರಸಾರವಾಗಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ವಿಡಿಯೋ ಶುಭಾಶಯವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಸುನೀತಾ ವಿಲಿಯಮ್ಸ್ ಅವರು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ ಮತ್ತು ಈ ಹಿಂದೆ ISS ನಿಂದ ಜಗತ್ತಿನಾದ್ಯಂತ ಜನರಿಗೆ ದೀಪಾವಳಿ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ. ಸುನಿತಾ ವಿಲಿಯಮ್ಸ್ ಸಮೋಸಾ ಮತ್ತು ಉಪನಿಷತ್ತುಗಳು ಮತ್ತು ಭಗವದ್ಗೀತೆಯ ಪ್ರತಿಗಳು ಸೇರಿದಂತೆ ಅನೇಕ ಭಾರತೀಯ/ಹಿಂದೂ ಸಾಂಸ್ಕೃತಿಕ ವಸ್ತುಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ:ಅಮೆರಿಕದಿಂದ ಭಾರತೀಯರ ಗಡೀಪಾರು: ಅಕ್ರಮ ವಲಸೆ ತಡೆಯ ಸಹಜ ಪ್ರಕ್ರಿಯೆ