ಹೈದರಾಬಾದ್: ಅರ್ಜೆಂಟಿನಾ ದೇಶದ ಗಡಿ ಸಮೀಪವಿರುವ ಚಿಲಿ ದೇಶದ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಸಮೀಕ್ಷೆ ವರದಿ ತಿಳಿಸಿದೆ. ಚಿಲಿಯ ಸ್ಯಾನ್ ಪೆಡ್ರೊ ಡಿ ಅಟಕಾಮಾದ ಆಗ್ನೇಯ ದಿಕ್ಕಿನ 45 ಕಿಲೋ ಮೀಟರ್ ಮತ್ತು 117 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಯುಎಸ್ಜಿಎಸ್ ಹೇಳಿದೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಗ್ಯಾಬ್ರಿಯಲ್ ಬೊರಿಕ್, 'ಪ್ರಾಥಮಿಕ ವರದಿಯಲ್ಲಿ ಯಾವುದೇ ಗಂಭೀರ ಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸುನಾಮಿ ಆತಂಕವಿಲ್ಲ' ಎಂದು ತಿಳಿಸಿದ್ದಾರೆ.
'ಕೆಲವು ಬಂಡೆಗಳು ಸಡಿಲಗೊಂಡು ಕಾಲಮಾ ನಗರಗಳನ್ನು ಟೊಕೊಪಿಲ್ಲಾಗೆ ಸಂಪರ್ಕಿಸುವ ಹೆದ್ದಾರಿಯ ಮೇಲೆ ಉರುಳಿ ಬಿದ್ದಿವೆ. ಕಂಪನದ ಕೇಂದ್ರಬಿಂದುವಿನ ಪೂರ್ವಕ್ಕೆ ಮತ್ತು ಸ್ಯಾನ್ ಪೆಡ್ರೊ ಡಿ ಅಟಕಾಮಾದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ' ಎಂದು ಮಾಹಿತಿ ಒದಗಿಸಿದ್ದಾರೆ.
ಭೂಕಂಪನವನ್ನು ಚಿಲಿ ರಾಷ್ಟ್ರೀಯ ವಿಪತ್ತು ನಿಯಂತ್ರಣ ಮತ್ತು ಪ್ರತಿಕ್ರಿಯೆ ಸೇವೆ ಅಧಿಕಾರಿಗಳು ಕೂಡಾ ದೃಢಪಡಿಸಿದ್ದಾರೆ. ತೀವ್ರತೆ ಪ್ರದೇಶಗಳನುಸಾರ ಭಿನ್ನವಾಗಿದೆ. ತಾರಾಪಾಕ್, ಆಂಟೊಫಾಗಸ್ಟಾ, ಅಟಕಾಮಾ, ಕೊಕ್ವಿಂಬೊ, ಅರಿಕಾ ಮತ್ತು ಪರಿನಾಕೋಟಾ ಭೂಮಿ ಕಂಪಿಸಿದೆ ಎಂದು ಹೇಳಿದ್ದಾರೆ.
ಚಿಲಿ ಫೆಸಿಫಿಕ್ ಸಾಗರ ಪ್ರದೇಶದಲ್ಲಿದೆ. ಇಲ್ಲಿ ಭೂಕಂಪನಗಳು ಸಾಮಾನ್ಯ. 2010ರಲ್ಲಿ 8.8 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಸುನಾಮಿಯಿಂದಾಗಿ 526 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ತೈಲ ಹಡಗು ಮುಳುಗಡೆ ಪ್ರಕರಣ: 8 ಭಾರತೀಯರು ಸೇರಿ 9 ಸಿಬ್ಬಂದಿ ರಕ್ಷಣೆ, ಓರ್ವ ಸಾವು