ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಉಕ್ರೇನ್ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಕೆಲ ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಉಕ್ರೇನ್ ವಿರುದ್ಧ ರಷ್ಯಾ ಆರಂಭಿಸಿರುವ ಯುದ್ಧವನ್ನು ಕೊನೆಗೊಳಿಸುವ ಜಾಗತಿಕ ಪ್ರಯತ್ನಗಳ ಭಾಗವಾಗಿ ರಾಜಧಾನಿ ಕೀವ್ನಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಬಹುದು ಎಂದು ಶನಿವಾರ ರಾಜತಾಂತ್ರಿಕ ಮೂಲಗಳು ಹೇಳಿವೆ.
ಆಗಸ್ಟ್ 24 ರ ಉಕ್ರೇನಿಯನ್ ರಾಷ್ಟ್ರೀಯ ದಿನದಂದು ಪ್ರಸ್ತಾವಿತ ಭೇಟಿಯನ್ನು ಯೋಜಿಸಲಾಗಿದೆ ಮತ್ತು ಎರಡು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ಪೋಲೆಂಡ್ಗೆ ಪ್ರಯಾಣಿಸಬಹುದು ಎಂದು ಮೂಲಗಳು ತಿಳಿಸಿವೆ.
ಒಂದೊಮ್ಮೆ ಈ ಭೇಟಿ ನಡೆದರೆ, ಇದು ಉಕ್ರೇನ್ಗೆ ಮೋದಿಯವರ ಮೊದಲ ಭೇಟಿಯಾಗಲಿದೆ ಮತ್ತು ಸುಮಾರು 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರ ಪ್ರಥಮ ಪೋಲೆಂಡ್ ಭೇಟಿಯಾಗಲಿದೆ.
ಮೋದಿಯವರ ಇತ್ತೀಚಿನ ಮಾಸ್ಕೋ ಭೇಟಿಯ ಬಗ್ಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಮಧ್ಯದಲ್ಲಿಯೇ ಈಗ ಪ್ರವಾಸದ ಬಗ್ಗೆ ಭಾರತ ಮತ್ತು ಉಕ್ರೇನ್ ಅಧಿಕಾರಿಗಳ ನಡುವೆ ಅಂತಿಮ ಸುತ್ತಿನ ಚರ್ಚೆಗಳು ನಡೆದಿವೆ. ಕೀವ್ಗೆ ಮೋದಿಯವರ ಉದ್ದೇಶಿತ ಭೇಟಿಯನ್ನು ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ನವದೆಹಲಿಯ ಸಮತೋಲನ ಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯ ಯುದ್ಧ ವಲಯವಾಗಿರುವ ಉಕ್ರೇನ್ಗೆ ಪ್ರಯಾಣಿಸಲು ಲಾಜಿಸ್ಟಿಕ್ಸ್ ವಿಷಯದಲ್ಲಿ ಭಾರಿ ಸಿದ್ಧತೆಗಳನ್ನು ಮಾಡಬೇಕಾಗಿರುವುದರಿಂದ ಭೇಟಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜುಲೈ 19 ರಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಪ್ರಧಾನಿ ಭೇಟಿಯ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ಹೇಳಿವೆ.
ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವ ಮಾರ್ಗಗಳನ್ನು ಹುಡುಕುವುದು ಮೋದಿಯವರ ಭೇಟಿಯ ಕೇಂದ್ರಬಿಂದುವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ತಜ್ಞರು ತಿಳಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ನ್ಯಾಟೋ ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಜುಲೈ 8 ರಿಂದ 9 ರವರೆಗೆ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದಕ್ಕೆ ಯುಎಸ್ ಮತ್ತು ಅದರ ಹಲವಾರು ಮಿತ್ರರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ಮೋದಿ ತಮ್ಮ ಮೂರನೇ ಅವಧಿಯ ಮೊದಲ ದ್ವಿಪಕ್ಷೀಯ ಪ್ರವಾಸಕ್ಕಾಗಿ ರಷ್ಯಾವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ಅಸಮಾಧಾನಗೊಂಡಿವೆ ಎಂದು ತಿಳಿದುಬಂದಿದೆ.
ಪ್ರಧಾನಿಯ ಮಾಸ್ಕೋ ಭೇಟಿಯ ಬಗ್ಗೆ ವಾಷಿಂಗ್ಟನ್ನ ಆಕ್ಷೇಪವನ್ನು ಭಾರತ ಗುರುವಾರ ತಿರಸ್ಕರಿಸಿದೆ ಮತ್ತು ಬಹುಧ್ರುವೀಯ ಜಗತ್ತಿನಲ್ಲಿ ಎಲ್ಲಾ ದೇಶಗಳಿಗೆ ಆಯ್ಕೆಯ ಸ್ವಾತಂತ್ರ್ಯ ಇದೆ ಮತ್ತು ಪ್ರತಿಯೊಬ್ಬರೂ ಅಂಥ ವಾಸ್ತವಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ : ಇಸ್ರೇಲ್ನ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ: ಮಕ್ಕಳು ಸೇರಿ 11 ಸಾವು, ನಮ್ಮ ಪಾತ್ರವಿಲ್ಲ- ಹಿಜ್ಬುಲ್ಲಾ - Hezbollah Attacks Israel