ಇಸ್ಲಾಮಾಬಾದ್ : ನೈಋತ್ಯ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಗೆ ಕನಿಷ್ಠ ಏಳು ಜನ ಬಲಿಯಾಗಿದ್ದಾರೆ. ನಿದ್ರೆಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಜನಾಂಗೀಯ ಭಯೋತ್ಪಾದನೆ ಘಟನೆ ಇದಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪಾಕಿಸ್ತಾನದ ರಾಜಕೀಯ ಮಿತ್ರ ಚೀನಾ ಆಳ ಸಮುದ್ರ ಬಂದರನ್ನು ನಿರ್ಮಿಸುತ್ತಿರುವ, ಯಾವಾಗಲೂ ಪ್ರಕ್ಷುಬ್ಧವಾಗಿರುವ ಕರಾವಳಿ ಪಟ್ಟಣ ಗ್ವಾದರ್ನಲ್ಲಿ ಈ ದಾಳಿ ನಡೆದಿದೆ. ಗ್ವಾದಾರ್ ಬಂದರು ಯೋಜನೆಗೆ ಸ್ಥಳೀಯ ಜನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಮೃತರು ಮಧ್ಯ ಪಂಜಾಬ್ ಪ್ರಾಂತ್ಯದವರಾಗಿದ್ದು ಪಟ್ಟಣದಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿದ್ದರು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಹ್ಸಿನ್ ಅಲಿ ತಿಳಿಸಿದ್ದಾರೆ. ಸುಮಾರು ಮೂರು ವಾರಗಳಲ್ಲಿ ಬಲೂಚಿಸ್ತಾನದ ಉಗ್ರಗಾಮಿ ಪೀಡಿತ ಪ್ರಾಂತ್ಯದಲ್ಲಿ ಪಂಜಾಬಿನ ಜನರ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ಕಳೆದ ತಿಂಗಳು ಉಗ್ರರು ಒಂಬತ್ತು ಬಸ್ ಪ್ರಯಾಣಿಕರನ್ನು ಇಳಿಸಿ ಮರಣದಂಡನೆ ಶೈಲಿಯ ಗುಂಡಿನ ದಾಳಿಯಲ್ಲಿ ಅವರನ್ನು ಹತ್ಯೆ ಮಾಡಿದ್ದರು.
ಪ್ರಾಂತ್ಯದಲ್ಲಿ ಚೀನಾದ ಹೂಡಿಕೆಗಳಿಂದ ನಿರ್ಮಾಣವಾಗುತ್ತಿರುವ ಯೋಜನೆಗಳನ್ನು ವಿರೋಧಿಸುವ ರಾಷ್ಟ್ರೀಯವಾದಿ ಉಗ್ರಗಾಮಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಕಳೆದ ತಿಂಗಳ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಗುಪ್ತಚರ ಇಲಾಖೆಯ ಗೂಢಚಾರರನ್ನು ಹತ್ಯೆ ಮಾಡಿರುವುದಾಗಿ ಬಿಎಲ್ಎ ಆಗ ಹೇಳಿಕೊಂಡಿತ್ತು.
ಆದರೆ ಗುರುವಾರದ ದಾಳಿಯ ಜವಾಬ್ದಾರಿಯನ್ನು ಈವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಬಹುಶಃ ಬಿಎಲ್ಎ ಸಂಘಟನೆಯೇ ಈ ದಾಳಿಯನ್ನು ಕೂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚೀನಾ ತನ್ನ ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಕ್ಸಿನ್ಜಿಯಾಂಗ್ ಅನ್ನು ಪಾಕಿಸ್ತಾನದ ಮೂಲಕ ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸಿ ಆ ಮೂಲಕ ಮಧ್ಯಪ್ರಾಚ್ಯ, ಯುರೋಪ್, ಆಫ್ರಿಕಾ ಮತ್ತು ಅದರಾಚೆಗಿನ ಮಾರುಕಟ್ಟೆಗಳನ್ನು ತಲುಪಲು ಪ್ರಯತ್ನಿಸುತ್ತಿದೆ. ಆದರೆ ಚೀನಾದ ಈ ಎಲ್ಲ ಯೋಜನೆಗಳ ವಿರುದ್ಧ ಭಯೋತ್ಪಾದಕ ಸಂಘಟನೆಗಳು ಹಿಂಸಾತ್ಮಕವಾಗಿ ಪ್ರತೀಕಾರ ತೆಗೆದುಕೊಳ್ಳುತ್ತಿವೆ.
ನೂರಾರು ಕಿಲೋಮೀಟರ್ ಕಡಲ ತೀರಗಳು ಸೇರಿದಂತೆ ಭೂಮಿ ಮತ್ತು ಸಂಪನ್ಮೂಲಗಳನ್ನು ಚೀನಾ ಕದಿಯುತ್ತಿದೆ ಎಂದು ಬಲೂಚ್ ಉಗ್ರಗಾಮಿಗಳು ಮತ್ತು ರಾಜಕೀಯ ಪಕ್ಷಗಳು ಆರೋಪಿಸಿವೆ. ಕಳೆದ ವರ್ಷ ಬಲೂಚ್ ಉಗ್ರರು 110 ದಾಳಿಗಳನ್ನು ನಡೆಸಿದ್ದಾರೆ ಎಂದು ಇಸ್ಲಾಮಾಬಾದ್ ಮೂಲದ ಥಿಂಕ್ ಟ್ಯಾಂಕ್ ಪಾಕಿಸ್ತಾನ್ ಇನ್ ಸ್ಟಿಟ್ಯೂಟ್ ಆಫ್ ಪೀಸ್ ಸ್ಟಡೀಸ್ ತಿಳಿಸಿದೆ.
ಇದನ್ನೂ ಓದಿ : 'ಇಸ್ರೇಲ್ಗೆ ಅಮೆರಿಕ ಬೆಂಬಲ ನಿರಂತರ' ಯಹೂದಿ ವಿರೋಧಿ ಪ್ರತಿಭಟನೆ ಖಂಡಿಸಿದ ಬೈಡನ್ - Anti Semitism