ಟೆಲ್ ಅವಿವ್: ಇರಾನ್ ಬೆಂಬಲಿತ ಉಗ್ರ ಸಂಘಟನೆ ಹಿಜ್ಬುಲ್ಲಾ ತನ್ನ ಖಾಸಗಿ ಮನೆಯ ಮೇಲೆ ಡ್ರೋನ್ ದಾಳಿ ನಡೆಸಿರುವುದು 'ಗಂಭೀರ ಪ್ರಮಾದ' ಎಂದು ಎಚ್ಚರಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತನ್ನನ್ನು ಕೊಲ್ಲುವ ಯತ್ನವು ಭಯೋತ್ಪಾದಕರನ್ನು ಹಾಗೂ ಅವರ ಬೆಂಬಲಿಗರನ್ನು ನಾಶ ಮಾಡುವ ಇಸ್ರೇಲ್ನ ದೃಢ ನಿಶ್ಚಯವನ್ನು ಒಂದಿನಿತೂ ಕಡಿಮೆ ಮಾಡಲಾರದು ಎಂದು ಹೇಳಿದ್ದಾರೆ.
ಇಸ್ರೇಲ್ನ ಕೈಸೇರಿಯಾ ನಗರದಲ್ಲಿನ ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದ ನಂತರ ನೆತನ್ಯಾಹು ಈ ಪ್ರತಿಕ್ರಿಯೆ ನೀಡಿದ್ದಾರೆ. ದಾಳಿಯ ಸಮಯದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಮನೆಯಲ್ಲಿ ಇರಲಿಲ್ಲ.
ಶನಿವಾರ ಬೆಳಿಗ್ಗೆ ಲೆಬನಾನ್ ಕಡೆಯಿಂದ ಹಾರಿಬಂದ ಇತರ ಎರಡು ಡ್ರೋನ್ ಗಳನ್ನು ಇಸ್ರೇಲ್ನ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿದ್ದು, ಟೆಲ್ ಅವೀವ್ನಲ್ಲಿ ಸೈರನ್ಗಳು ಮೊಳಗಿವೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, "ಇರಾನ್ನ ಛಾಯಾ ಸಂಘಟನೆ ಹಿಜ್ಬುಲ್ಲಾ ಇಂದು ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಹತ್ಯೆ ಮಾಡಲು ಯತ್ನಿಸಿರುವುದು ಗಂಭೀರ ಪ್ರಮಾದ. ಇದು ನಮ್ಮ ದೇಶದ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ನಾವು ನಮ್ಮ ಶತ್ರುಗಳ ವಿರುದ್ಧ ನ್ಯಾಯಯುತ ಯುದ್ಧ ಮುಂದುವರಿಸುವುದರಿಂದ ನನ್ನನ್ನು ಅಥವಾ ಇಸ್ರೇಲ್ ದೇಶವನ್ನು ತಡೆಯಲಾರದು." ಎಂದು ಹೇಳಿದ್ದಾರೆ.
ಇಸ್ರೇಲ್ ನಾಗರಿಕರಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾರೇ ಆಗಿದ್ದರೂ ಅವರು ಅದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನೆತನ್ಯಾಹು ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದಕರ ವಿರುದ್ಧ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಮತ್ತು ಗಾಜಾದಿಂದ ಒತ್ತೆಯಾಳುಗಳನ್ನು ಮರಳಿ ಕರೆತರಲಿದೆ ಎಂದು ಭರವಸೆ ನೀಡಿದ್ದಾರೆ.
"ನಾವು ಭಯೋತ್ಪಾದಕರನ್ನು ಮತ್ತು ಅವರನ್ನು ನಮ್ಮ ಮೇಲೆ ದಾಳಿ ಮಾಡಲು ಕಳುಹಿಸುವವರನ್ನು ನಿರ್ಮೂಲನೆ ಮಾಡುವುದನ್ನು ಮುಂದುವರಿಸುತ್ತೇವೆ. ನಾವು ನಮ್ಮ ಒತ್ತೆಯಾಳುಗಳನ್ನು ಗಾಜಾದಿಂದ ಮನೆಗೆ ಮರಳಿ ಕರೆತರಲಿದ್ದೇವೆ. ನಮ್ಮ ಉತ್ತರದ ಗಡಿಯಲ್ಲಿ ವಾಸಿಸುವ ನಮ್ಮ ನಾಗರಿಕರು ಸುರಕ್ಷಿತವಾಗಿ ಅವರವರ ಮನೆಗಳಿಗೆ ಹಿಂದಿರುಗುವಂತೆ ಮಾಡುತ್ತೇವೆ." ಎಂದು ನೆತನ್ಯಾಹು ಎಕ್ಸ್ನಲ್ಲಿ ಬರೆದಿದ್ದಾರೆ.
ಎಕ್ಸ್ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿರುವ ನೆತನ್ಯಾಹು, "ಯಾಹ್ಯಾ ಸಿನ್ವರ್ ಕೊಲ್ಲಲ್ಪಟ್ಟಿದ್ದಾನೆ. ಇಸ್ರೇಲಿ ರಕ್ಷಣಾ ಪಡೆಗಳ ಧೈರ್ಯಶಾಲಿ ಸೈನಿಕರು ಆತನನ್ನು ರಫಾದಲ್ಲಿ ಕೊಂದು ಹಾಕಿದ್ದಾರೆ. ಇದು ಗಾಜಾದಲ್ಲಿನ ಯುದ್ಧದ ಅಂತ್ಯವಲ್ಲದಿದ್ದರೂ, ಇದು ಅಂತ್ಯದ ಪ್ರಾರಂಭವಾಗಿದೆ. ಗಾಜಾದ ಜನರಿಗೆ ನಾನು ಒಂದು ಸರಳ ಸಂದೇಶ ನೀಡಬಯಸುತ್ತೇನೆ- ಈ ಯುದ್ಧ ನಾಳೆಯೇ ಕೊನೆಯಾಗಬಹುದು... ಅದು ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಮಾತ್ರ." ಎಂದು ಬರೆದಿದ್ದಾರೆ.
ಇದನ್ನೂ ಓದಿ : ಇಸ್ರೇಲ್ ದಾಳಿಯಲ್ಲಿ ಲೆಬನಾನ್ನ ನೀರು ಪೂರೈಕೆ ಘಟಕ ಧ್ವಂಸ