Iran Israel War US Involvement, ವಾಷಿಂಗ್ಟನ್, ಅಮೆರಿಕ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಸಂದರ್ಭದಲ್ಲಿ ಅಮೆರಿಕ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ - ಇಸ್ರೇಲ್‌ಗೆ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ರವಾನಿಸುವ ಘೋಷಣೆ ಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇಸ್ರೇಲ್ ಹಮಾಸ್, ಹಿಜ್ಬುಲ್ಲಾ ಉಗ್ರರ ಮೇಲೆ ಮುಗಿ ಬೀಳುತ್ತಿದೆ. ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಗಂಭೀರ ಕಳವಳವನ್ನು ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಇರಾನ್ ಗೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಅಮೆರಿಕ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಪಶ್ಚಿಮ ಏಷ್ಯಾಕ್ಕೆ ಹೆಚ್ಚಿನ ಸೇನಾ ಉಪಕರಣಗಳನ್ನು ಸ್ಥಳಾಂತರಿಸುತ್ತಿದ್ದೇವೆ ಎಂದು ಅಮೆರಿಕ ಘೋಷಿಸಿದೆ. ಪೆಂಟಗನ್‌ನ ವಕ್ತಾರ ಮೇಜರ್ ಜನರಲ್ ಪ್ಯಾಟ್ ರೈಡರ್ ಈ ವಿಷಯ ದೃಢಪಡಿಸಿದ್ದಾರೆ.
ಇರಾನ್ ಮತ್ತು ಅದರ ಬೆಂಬಲಿಗರು ಅಮೆರಿಕದ ನಾಗರಿಕರು ಮತ್ತು ಸಿಬ್ಬಂದಿ ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ, ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ಯಾಟ್ ರೈಡರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ತಿಂಗಳು ಹೊಸ ಶಸ್ತ್ರಾಸ್ತ್ರಗಳನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಥಾಡ್ ಜತೆಗೆ ಇನ್ನಷ್ಟು ಆಧುನಿಕ ಶಸ್ತ್ರಾಸ್ತ್ರಗಳ ರವಾನೆ: ದೀರ್ಘ-ಶ್ರೇಣಿಯ B-52 ಬಾಂಬರ್ ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ವಿಧ್ವಂಸಕಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಲಾಗಿದೆ ಎಂದು ಯುಎಸ್ ಬಹಿರಂಗಪಡಿಸಿದೆ. ಇರಾನ್‌ಗೆ ಎಚ್ಚರಿಕೆಯಾಗಿ ಈ ಉಪಕರಣವನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಇದೇ ವೇಳೆ ಅಮೆರಿಕ ಸ್ಪಷ್ಟಪಡಿಸಿದೆ. ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಬ್ಯಾಟರಿ - ಥಾಡ್ ಜೊತೆಗೆ ಇಸ್ರೇಲ್‌ಗೆ ಮಿಲಿಟರಿ ಪಡೆಗಳನ್ನು ಕಳುಹಿಸುವುದಾಗಿ ಪೆಂಟಗನ್ ಇತ್ತೀಚೆಗೆ ಘೋಷಿಸಿದೆ ಎಂದು ತಿಳಿದು ಬಂದಿದೆ. ಅಮೆರಿಕದ ಈ ಘೋಷಣೆ ಬೆನ್ನಲ್ಲೇ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಸಿದ್ಧತೆ ನಡೆಸಿರುವುದು ಗಮನಾರ್ಹ.
ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಇರಾನ್: ಅಕ್ಟೋಬರ್ 1 ರಂದು ಇರಾನ್ ಟೆಲ್ ಅವಿವ್ ಮೇಲೆ ಇರಾನ್ ಸುಮಾರು 200 ಕ್ಷಿಪಣಿಗಳನ್ನು ಉಡಾಯಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ನ ಐಡಿಎಫ್, ಇರಾನ್‌ನ ಸೇನಾ ನೆಲೆಗಳು ಮತ್ತು ಕ್ಷಿಪಣಿ ತಯಾರಿಕಾ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಟೆಹ್ರಾನ್‌ನ ನಾಲ್ವರು ಸೈನಿಕರು ಸಾವನ್ನಪ್ಪಿದರು ಮತ್ತು ಕ್ಷಿಪಣಿ ಉತ್ಪಾದನಾ ಸೌಲಭ್ಯಗಳು ಸಂಪೂರ್ಣವಾಗಿ ನಾಶವಾಗಿದ್ದವು. ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಈ ಸಮಸ್ಯೆಯನ್ನು ಉಲ್ಬಣಗೊಳಿಸದಂತೆ ಹಲವು ದೇಶಗಳು ಇರಾನ್‌ಗೆ ಸಲಹೆ ನೀಡಿವೆ. ಈ ಪ್ರಕ್ರಿಯೆಯಲ್ಲಿ ಅಮೆರಿಕ ಇನ್ನಷ್ಟು ಅಸ್ತ್ರಗಳನ್ನು ಒದಗಿಸಲಿದೆ ಎಂದು ವೀಕ್ಷಕರು ಎಚ್ಚರಿಸುತ್ತಿದ್ದು, ಇದು ಪಶ್ಚಿಮ ಏಷ್ಯಾದ ಉದ್ವಿಗ್ನತೆಯನ್ನು ಇನ್ನಷ್ಟು ಉಲ್ಬಣಗೊಳಿಸುವ ಸಾಧ್ಯತೆ ಇದೆ.
ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸಿದ್ಧತೆ: ಇನ್ನೊಂದೆಡೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸಿದ್ಧತೆ ನಡೆಸಿದೆ. ನ್ಯೂಯಾರ್ಕ್ ಟೈಮ್ಸ್ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ನಿಯತಕಾಲಿಕದ ಲೇಖನದ ಪ್ರಕಾರ, ಇಸ್ರೇಲ್‌ನಲ್ಲಿ ಯಾವ ಗುರಿಗಳನ್ನು ಹೊಡೆಯಬೇಕು ಎಂಬುದರ ಕುರಿತು ಟೆಹ್ರಾನ್ ಈಗಾಗಲೇ ತಿಳಿವಳಿಕೆ ಹೊಂದಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ದಾಳಿ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಅದು ವರದಿ ಮಾಡಿದೆ. ಮಂಗಳವಾರ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದರೆ ವಾತಾವರಣವು ಅವರ ಪರವಾಗಿ ತಿರುಗುವ ಸಾಧ್ಯತೆಯಿರುವುದರಿಂದ ದಾಳಿಯನ್ನು ಮುಂದೂಡಲಾಗಿದೆ ಎಂದು ಇರಾನ್‌ನ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇತ್ತೀಚಿನ ಸಭೆಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರು ಪ್ರತಿದಾಳಿಗೆ ಸಿದ್ಧರಾಗಿರಲು ಮಿಲಿಟರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತೋರುತ್ತದೆ
ಇದನ್ನು ಓದಿ:ನಸ್ರಲ್ಲಾರ ಹೋರಾಟದ ದಾರಿಯಲ್ಲೇ ಸಾಗುವೆ: ಹಿಜ್ಬುಲ್ಲಾದ ಹೊಸ ನಾಯಕ ಖಾಸಿಮ್
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನೋಡಿ ತಲೆತಗ್ಗಿಸುವಂತಾಗಿದೆ: ಮರಿಯಮ್ ನವಾಜ್