ನವದೆಹಲಿ/ ಮಾಸ್ಕೋ: ರಷ್ಯಾ ಮತ್ತು ಆಸ್ಟ್ರಿಯಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಷ್ಯಾದ ಮಾಸ್ಕೋಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ರಷ್ಯಾ ಉಪ ಪ್ರಧಾನಿ ಡೆನಿಲ್ ಮಾಂಟುರೊವ್ ಅವರು ಬರಮಾಡಿಕೊಂಡರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಾರತೀಯ ಅನಿವಾಸಿಗಳು ಕೂಡ ಸ್ವಾಗತ ಕೋರಿದರು.
ಪ್ರಧಾನಿ ಉಳಿದುಕೊಳ್ಳುವ ಕಾರ್ಲ್ಟನ್ ಹೋಟೆಲ್ ಮುಂಭಾಗ ನೆರೆದಿದ್ದ ಭಾರತೀಯರಿಗೆ ಮೋದಿ ಹಸ್ತಲಾಘವ ಮಾಡಿದರು. ಹಲವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಪ್ರಧಾನಿಯ ಜೊತೆಗೆ ಹಲವು ಮಕ್ಕಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.
Landed in Moscow. Looking forward to further deepening the Special and Privileged Strategic Partnership between our nations, especially in futuristic areas of cooperation. Stronger ties between our nations will greatly benefit our people. pic.twitter.com/oUE1aC00EN
— Narendra Modi (@narendramodi) July 8, 2024
ಭಾರತೀಯ ಸಂಪ್ರದಾಯದ ಕಲಾವಿದರು ನೃತ್ಯ ಮಾಡಿದರೆ, ನೆರೆದಿದ್ದ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇನ್ನು ವಿಮಾನ ನಿಲ್ದಾಣದಲ್ಲಿ ಭಾರತದ ಪ್ರಧಾನಿಗೆ ಗಾರ್ಡ್ ಆಫ್ ಹಾನರ್ ನೀಡಲಾಯಿತು.
ಪ್ರವಾಸದ ವೇಳೆ ಮೋದಿ ಹೇಳಿದ್ದಿಷ್ಟು: ಈ ಪ್ರವಾಸವು ಮೂರು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಮೇಲೆ ಈ ಭೇಟಿ ಪ್ರಭಾವ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ರಷ್ಯಾಕ್ಕೆ ಶೀತಲಸಮರ ಕಾಲದಿಂದಲೂ ಸ್ನೇಹ ರಾಷ್ಟ್ರವಾಗಿದೆ. ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಮತ್ತು ತೈಲ ಪೂರೈಕೆದಾರ ರಾಷ್ಟ್ರವೂ ಹೌದು. ಈ ಸಂಬಂಧವನ್ನು ಹೊಸ ಎತ್ತರಕ್ಕೇರಿಸುವ ಪ್ರವಾಸ ಇದಾಗಲಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ.
A memorable welcome in Moscow! I thank the Indian community for their affection. pic.twitter.com/acTHlLQ3Rs
— Narendra Modi (@narendramodi) July 8, 2024
40 ವರ್ಷ ಬಳಿಕ ಆಸ್ಟ್ರಿಯಾಕ್ಕೆ ಭಾರತದ ಪಿಎಂ: ರಷ್ಯಾ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಪ್ರಧಾನಿಯೊಬ್ಬರು 40 ವರ್ಷಗಳ ಬಳಿಕ ನೀಡುತ್ತಿರುವ ಭೇಟಿ ಇದಾಗಲಿದೆ. ಮಂಗಳವಾರ ರಷ್ಯಾದಲ್ಲಿ 22ನೇ ಭಾರತ - ರಷ್ಯಾ ವಾರ್ಷಿಕ ಶೃಂಗಸಭೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಕುರಿತು ಮೋದಿ ಮತ್ತು ಪುಟಿನ್ ಮಾತುಕತೆ ನಡೆಸಲಿದ್ದಾರೆ.
ನ್ಯಾಟೋ ಶೃಂಗಸಭೆ: ಇದೇ ಸಂದರ್ಭದಲ್ಲಿ ನ್ಯಾಟೋ ಶೃಂಗಸಭೆ ಅಮೆರಿಕದಲ್ಲಿ ನಡೆಯುತ್ತಿದೆ. ಮೋದಿ ರಷ್ಯಾ ಭೇಟಿಯ ಮೇಲೆ ಇಡೀ ವಿಶ್ವವೇ, ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಕಣ್ಣಿಟ್ಟಿವೆ. ಅಮೆರಿಕದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ಮೋದಿ ರಷ್ಯಾ ಭೇಟಿಗೂ ನ್ಯಾಟೋ ಶೃಂಗಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. ಇದಕ್ಕೂ ಮುನ್ನ ಮೋದಿ 2019ರಲ್ಲಿ ರಷ್ಯಾಕ್ಕೆ ತೆರಳಿದ್ದರು. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಕೊನೆಯ ಭೇಟಿಯಾಗಿತ್ತು.
ಇದನ್ನೂ ಓದಿ: ರಷ್ಯಾಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ - PM Modi Russia Visit