ಕೊಲಂಬೊ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ನಡುವೆಯೇ ಶ್ರೀಲಂಕಾ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದೆ. ಶನಿವಾರ (ಸೆ.21) ಮತದಾನ ನಡೆದ ಚುನಾವಣೆ ಮುಗಿದಿದ್ದು, ಭಾನುವಾರ ಪ್ರಕಟವಾದ ಫಲಿತಾಂಶದಲ್ಲಿ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸಾನಾಯಕೆ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ.
ಭಾನುವಾರ ನಡೆದ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ 56 ವರ್ಷದ ದಿಸ್ಸಾನಾಯಕೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (ಎಸ್‌ಜೆಬಿ)ದ ನಾಯಕ ಸಜಿತ್ ಪ್ರೇಮದಾಸ್ ಅವರನ್ನು ಸೋಲಿಸಿದರು. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದು ಭಾರಿ ನಿರಾಸೆ ಅನುಭವಿಸಿದರು.
ಭರ್ಜರಿ ಜಯ ಗಳಿಸಿರುವ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಪಿಪಿ ತಿಳಿಸಿದೆ. ಶನಿವಾರ ನಡೆದ ಮೊದಲ ಸುತ್ತಿನ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿಯು ಶೇಕಡಾ 50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗ ಎರಡನೇ ಸುತ್ತಿನ ಮತ ಎಣಿಕೆಗೆ ಸೂಚಿಸಿತ್ತು. ದಿಸ್ಸಾನಾಯಕೆ ಅವರು ದೇಶದ 9ನೇ ಅಧ್ಯಕ್ಷರಾಗಿ ಅಧಿಕಾರ ನಡೆಸಲಿದ್ದಾರೆ.
ನೂತನ ಅಧ್ಯಕ್ಷ ದಿಸ್ಸಾನಾಯಕೆ ಅವರು ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ್ ಅವರಿಗಿಂತ ಸುಮಾರು 1.3 ಮಿಲಿಯನ್ ಮತಗಳ ಮುನ್ನಡೆ ಹೊಂದಿದ್ದಾರೆ. ದ್ವೀಪರಾಷ್ಟ್ರ 2022 ರಲ್ಲಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾಗ ಅಧಿಕಾರ ವಹಿಸಿಕೊಂಡ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಶೇಕಡಾ 17 ರಷ್ಟು ಮತಗಳನ್ನು ಮಾತ್ರ ಗಳಿಸಿದರು. ಆರ್ಥಿಕ ಪುನಶ್ಚೇತನಕ್ಕಾಗಿ ಜಾರಿ ಮಾಡಿದ ಕಠಿಣ ನಿಯಮಗಳು ಅವರ ಸೋಲಿಗೆ ಕಾರಣವಾದವು ಎಂದು ವಿಶ್ಲೇಷಿಸಲಾಗಿದೆ.
ರನಿಲ್ ವಿಕ್ರಮಸಿಂಘೆ ಅವರು ದುಪ್ಪಟ್ಟು ಮಾಡಿದ್ದ ಆದಾಯ ತೆರಿಗೆ ಕಡಿತ, ಆಹಾರ ಮತ್ತು ಔಷಧಿಗಳ ಮೇಲಿನ ಮಾರಾಟ ತೆರಿಗೆ ಕಡಿತಗೊಳಿಸಲು ದಿಸ್ಸಾನಾಯಕೆ ವಾಗ್ದಾನ ಮಾಡಿದ್ದಾರೆ.
ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡಿದ್ದ ದಿಸ್ಸಾನಾಯಕೆ ಅವರ ಮಾರ್ಕ್ಸ್‌ವಾದಿ ಪಕ್ಷವು 1970 ಮತ್ತು 1980ರ ದಶಕಗಳಲ್ಲಿ ನಡೆಸಿದ ದಂಗೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಸ್ಟ್ 2020ರಲ್ಲಿ ನಡೆದ ಈ ಹಿಂದಿನ ಸಂಸದೀಯ ಚುನಾವಣೆಯಲ್ಲಿ ಈ ಪಕ್ಷವು ಶೇಕಡಾ 4ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತ್ತು.