ಜೆರುಸಲೇಂ: ಲೆಬನಾನ್‌ನಿಂದ ಉತ್ತರ ಇಸ್ರೇಲ್ ಮೇಲೆ ಬುಧವಾರ ಬೆಳಗ್ಗೆ ಸುಮಾರು 160 ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿರಿಯ ಕಮಾಂಡರ್ ಸೇರಿದಂತೆ ನಾಲ್ವರು ಹಿಜ್ಬುಲ್ಲಾ ಅಧಿಕಾರಿಗಳು ಸಾವನ್ನಪ್ಪಿದ ಘಟನೆಯ ನಂತರ ಲೆಬನಾನ್ ಕಡೆಯಿಂದ ಈ ರಾಕೆಟ್ ದಾಳಿ ನಡೆದಿದೆ.
ಮುಂಜಾನೆ ಲೆಬನಾನ್ ಕಡೆಯಿಂದ ಸುಮಾರು 90 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ. ರಾಕೆಟ್ಗಳು ಅಪ್ಪಳಿಸಿದ್ದರಿಂದ ಇಸ್ರೇಲ್ನ ಹಲವಾರು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಮತ್ತು ರಕ್ಷಣಾ ಪ್ರಾಧಿಕಾರ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಲ್ಲದೆ ಪ್ರಮುಖ ವೈಮಾನಿಕ ರಕ್ಷಣಾ ನಿಯಂತ್ರಣ ಘಟಕ ಇರುವ ಅಪ್ಪರ್ ಗೆಲಿಲಿ ಪ್ರದೇಶದ ಪಶ್ಚಿಮ ಗೆಲಿಲಿ ಮತ್ತು ಮೌಂಟ್ ಮೆರಾನ್ ಮೇಲೆ ಕೂಡ ಸುಮಾರು 70 ರಾಕೆಟ್ಗಳಿಂದ ದಾಳಿ ನಡೆದಿದೆ.
"ಹಲವಾರು ಕ್ಷಿಪಣಿಗಳನ್ನು ಮಾರ್ಗ ಮಧ್ಯದಲ್ಲಿಯೇ ಹೊಡೆದುರುಳಿಸಲಾಗಿದೆ. ಬಹುತೇಕ ಕ್ಷಿಪಣಿಗಳು ಖಾಲಿ ಪ್ರದೇಶಗಳಲ್ಲಿ ಮತ್ತು ಉತ್ತರ ಇಸ್ರೇಲ್ನ ಹಲವಾರು ಸ್ಥಳಗಳಿಗೆ ಅಪ್ಪಳಿಸಿವೆ" ಎಂದು ಮಿಲಿಟರಿ ಹೇಳಿದೆ. ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ನಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಅಕ್ಟೋಬರ್ 7, 2023ರಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಹೊಸ ಸುತ್ತಿನ ಯುದ್ಧ ಪ್ರಾರಂಭವಾದ ನಂತರ ಲೆಬನಾನ್‌ನಿಂದ ಭಯೋತ್ಪಾದಕರು ಇಸ್ರೇಲ್ ಮೇಲೆ ನಡೆಸಿದ ಅತಿದೊಡ್ಡ ರಾಕೆಟ್ ದಾಳಿ ಇದಾಗಿದೆ.
ಮುಂದುವರಿದ ಕದನ ವಿರಾಮ ಯತ್ನ: ಗಾಜಾ ಸಂಘರ್ಷದಲ್ಲಿ ಕದನ ವಿರಾಮದ ಪ್ರಸ್ತಾಪವನ್ನು ಬೆಂಬಲಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ಹಮಾಸ್ ಸ್ವಾಗತಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದವನ್ನು ಜಾರಿಗೊಳಿಸಲು ಬ್ಲಿಂಕೆನ್ ಪ್ರಸ್ತುತ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದ್ದಾರೆ. ಹಮಾಸ್ ಕದನ ವಿರಾಮ ಪ್ರಸ್ತಾಪವನ್ನು ಒಪ್ಪಿಕೊಂಡಿದೆ ಎಂದು ಹಮಾಸ್ನ ಹಿರಿಯ ವಕ್ತಾರ ಸಮಿ ಅಬು ಜುಹ್ರಿ ಮಂಗಳವಾರ ಹೇಳಿದ್ದರು. ಅದರ ನಂತರ ಬ್ಲಿಂಕೆನ್ ಈ ಹೇಳಿಕೆ ನೀಡಿದ್ದಾರೆ ಎಂದು ಇಸ್ರೇಲ್ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ನ್ಯೂಸ್ ವರದಿ ಮಾಡಿದೆ.
ಬ್ಲಿಂಕೆನ್ ಸೋಮವಾರ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದರು ಮತ್ತು ಕದನ ವಿರಾಮ ಪ್ರಸ್ತಾಪಕ್ಕೆ ಪ್ರಧಾನಿ ನೆತನ್ಯಾಹು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಯುಎಸ್ನಿಂದ ಉಕ್ರೇನ್ಗೆ ಮತ್ತೊಂದು ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆ ಪೂರೈಕೆ: ವರದಿ - Russia Ukraine War