ಜೇರುಸೆಲಂ: ಉತ್ತರ ಇಸ್ರೇಲ್ನ ಸಫೇಡ್ ನಗರದ ಮೇಲೆ ಲೆಬನಾನ್ ಗುರುವಾರ ಸಂಜೆ 35 ರಾಕೆಟ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಪರಿಣಾಮವಾಗಿ ಬೆಂಕಿ ಅವಘಡ, ವಿದ್ಯುತ್ ಕಡಿತ ಮತ್ತು ಆಸ್ತಿ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಲೆಬನಾನ್‌ನ ಬಹುತೇಕ ದಾಳಿಗಳನ್ನು ಇಸ್ರೇಲ್ ರಕ್ಷಣಾ ದಳ (ಐಡಿಎಫ್)ನ ವೈಮಾನಿಕ ರಕ್ಷಣಾ ಪಡೆ ಯಶಸ್ವಿಯಾಗಿ ತಡೆದಿದೆ ಎಂದು ಇಸ್ರೇಲ್ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ನ, ಮಗೇನ್ ಡೇವಿಡ್ ಅಡೊಮ್ ರೆಸ್ಕೂ ಸರ್ವಿಸ್ ಪ್ರಕಾರ, ಈ ದಾಳಿಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆದರೆ, ಈ ಕ್ಷಿಪಣಿ ದಾಳಿಯಲ್ಲಿ ಒಂದು ಮನೆಗೆ ಹಾನಿಯಾಗಿದೆ ಎಂದು ಮೆರೊಮ್ ಹಗಲಿಲ್ ಪ್ರಾದೇಶಿಕ ಮಂಡಳಿ ತಿಳಿಸಿದೆ.
ವಿದ್ಯುತ್ ಕಡಿತದಿಂದಾಗಿ ಎಲಿವೇಟರ್ನಲ್ಲಿನ ನಾಗರಿಕರು ಸಿಕ್ಕಿ ಹಾಕಿಕೊಂಡರು, ಅನೇಕ ಕಡೆ ಅಗ್ನಿ ಅವಘಡಗಳು ಸಂಭವಿಸಿದೆ ಎಂದು ಅಗ್ನಿ ಮತ್ತು ರಕ್ಷಣಾ ಪ್ರಾಧಿಕಾರ ತಿಳಿಸಿದೆ. ಈ ನಡುವೆ ಪ್ರಕಟಣೆ ಹೊರಡಿಸಿರುವ ಲೆಬನಾನ್ ಶಸ್ತ್ರಸ್ತ್ರ ಗುಂಪು ಹೆಜ್ಬುಲ್ಲಾ, ಕತ್ಯುಷಾ ರಾಕೆಟ್‌ಗಳೊಂದಿಗೆ ಇಸ್ರೇಲಿ ವಾಯು ನೆಲೆಯ ಮೇಲೆ ದಾಳಿ ಮಾಡಲಾಗಿದೆ. ಇಸ್ರೇಲ್, ದಕ್ಷಿಣ ಲೆಬನಾನ್‌ನ ನಬಾತಿಹ್ ನಗರ ಮತ್ತು ಪೂರ್ವ ಲೆಬನಾನ್‌ನ ಸೊಹ್ಮೊರ್ ಪಟ್ಟಣದ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೆಲವು ರಾಕೆಟ್‌ಗಳನ್ನು ಇಸ್ರೇಲಿ ಐರನ್ ಡೋಮ್ ಕ್ಷಿಪಣಿಗಳು ತಡೆ ಹಿಡಿದಿವೆ ಎಂದು ಲೆಬನಾನಿನ ಸೇನಾ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಇಸ್ರೇಲ್-ಲೆಬನಾನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಹೆಜ್ಬುಲ್ಲಾಗಳ ಈ ಹೊಸ ದಾಳಿ ನಡೆದಿದೆ. ಹಿಜ್ಬುಲ್ಲಾ ವಿರುದ್ಧ ಪೂರ್ಣ ಪ್ರಮಾಣದ ದಾಳಿ ನಡೆಸಲು ತಾವು ಸಿದ್ದವಿರುವುದಾಗಿ ಇಸ್ರೇಲ್ ಈಗಾಗಲೇ ಘೋಷಿಸಿದೆ.
ಪ್ರತ್ಯೇಕ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಐಡಿಎಫ್, ದಕ್ಷಿಣ ಲೆಬನಾನಿನ ಹಳ್ಳಿಯಾದ ರಮ್ಯಾಹ್‌ನಲ್ಲಿ ಹಿಜ್ಬುಲ್ಲಾ ಮಿಲಿಟರಿ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ತಿರಿ ಗ್ರಾಮದಲ್ಲಿ ಹಿಜ್ಬುಲ್ಲಾ ಕಾರ್ಯಾಚರಣೆ ಇಬ್ಬರನ್ನು ಕೊಲ್ಲಲಾಗಿದೆ ಎಂದು ಅದು ತಿಳಿಸಿದೆ. ಅದೇ ದಿನ, ರಮ್ಯಾಹ್ ಮತ್ತು ಹದ್ದಾಥಾ ಮೇಲೆ ಇಸ್ರೇಲಿ ನಡೆಸಿದ ಎರಡು ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ಹೆಸರು ಹೇಳಲು ಇಚ್ಛಿಸದ ಲೆಬನಾನ್ ಮಿಲಿಟರಿ ಮೂಲಗಳು ಕ್ಸಿನುವಾ ಸುದ್ಧಿ ಸಂಸ್ಥೆಗೆ ದೃಢಪಡಿಸಿದೆ.
2023ರ ಅಕ್ಟೋಬರ್ 8ರಿಂದ ಲೆಬನಾನ್ ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದು, ಹಮಾಸ್ಗೆ ಬೆಂಬಲವಾಗಿ ಹಿಜ್ಬುಲ್ಲಾಗಳು ಇಸ್ರೇಲ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 14 ವರ್ಷಗಳ ಬಳಿಕ ಬಂಧನದಿಂದ ಮುಕ್ತಿ ಪಡೆದ ಜೂಲಿಯನ್ ಅಸ್ಸಾಂಜೆ ತಾಯ್ನಾಡಿಗೆ ವಾಪಸ್