ನ್ಯೂಯಾರ್ಕ್ : ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತೊಮ್ಮೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿದ ಬೆಜೋಸ್ 2021 ರ ನಂತರ ಮತ್ತೊಮ್ಮೆ ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ಬ್ಲೂಮ್ ಬರ್ಗ್ ಪ್ರಕಾರ, ಬೆಜೋಸ್ ಅವರ ಸಂಪತ್ತಿನ ನಿವ್ವಳ ಮೌಲ್ಯ ಸೋಮವಾರ 200 ಬಿಲಿಯನ್ ಡಾಲರ್ ಆಗಿತ್ತು. ಮಸ್ಕ್ ಅವರ ವೈಯಕ್ತಿಕ ಸಂಪತ್ತು 198 ಬಿಲಿಯನ್ ಡಾಲರ್ ಮತ್ತು ಎಲ್ವಿಎಂಎಚ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ಅವರ ವೈಯಕ್ತಿಕ ಸಂಪತ್ತು 197 ಬಿಲಿಯನ್ ಡಾಲರ್ ಆಗಿತ್ತು.
ಮಾರುಕಟ್ಟೆಗಳು, ಆರ್ಥಿಕತೆ ಮತ್ತು ಇತರ ಹಣಕಾಸು ವರದಿಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ ವೈಯಕ್ತಿಕ ಸಂಪತ್ತು ಅಳೆಯುವ ಶ್ರೇಯಾಂಕದಲ್ಲಿ ಮಸ್ಕ್, ಅರ್ನಾಲ್ಟ್ ಮತ್ತು ಬೆಜೋಸ್ ಇತ್ತೀಚಿನ ವರ್ಷಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬೆಜೋಸ್ ಅವರ ಬಹುತೇಕ ಸಂಪತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ನಿಂದ ಬಂದಿದೆ. 1994ರಲ್ಲಿ ಸಿಯಾಟಲ್ ಪ್ರದೇಶದ ತಮ್ಮ ಗ್ಯಾರೇಜ್ನಲ್ಲಿ ಬೆಜೋಸ್ ಅಮೆಜಾನ್ ಪ್ಲಾಟ್ಫಾರ್ಮ್ ಆರಂಭಿಸಿದ್ದರು. ನಂತರ ಅವರು ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಬ್ಲೂ ಒರಿಜಿನ್ ಸ್ಥಾಪಿಸಿದರು ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯನ್ನು $250 ಮಿಲಿಯನ್ ಗೆ ಖರೀದಿಸಿದರು. ಬೆಜೋಸ್ ಇತ್ತೀಚಿನ ವಾರಗಳಲ್ಲಿ 8.5 ಬಿಲಿಯನ್ ಡಾಲರ್ ಮೌಲ್ಯದ ಅಮೆಜಾನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಏತನ್ಮಧ್ಯೆ ಎಲೋನ್ ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯ ಈ ವರ್ಷ ಇಲ್ಲಿಯವರೆಗೆ 31 ಬಿಲಿಯನ್ ಡಾಲರ್ ಕುಸಿದಿದೆ. ಅವರ ಎಲೆಕ್ಟ್ರಿಕ್-ವಾಹನ ತಯಾರಕ ಕಂಪನಿ ಟೆಸ್ಲಾ ಷೇರುಗಳು ವರ್ಷದಿಂದ ವರ್ಷಕ್ಕೆ ಸುಮಾರು ಶೇ 24 ರಷ್ಟು ಕುಸಿದಿರುವುದೇ ಇದಕ್ಕೆ ಕಾರಣವಾಗಿದೆ.
ಹಲವಾರು ಕಂಪನಿಗಳ ಸಂಸ್ಥಾಪಕರಾಗಿರುವ ಉದ್ಯಮಿ ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯವು 2021 ರಲ್ಲಿ 300 ಬಿಲಿಯನ್ ಡಾಲರ್ ಮೀರಿತ್ತು. ಅದರ ಮುಂದಿನ ವರ್ಷ ಅವರು ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ ನೀಡಿ ಖರೀದಿಸಿದರು. ಟ್ವಿಟರ್ ಖರೀದಿಸಲು ಆ ವರ್ಷ ಮಸ್ಕ್ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದರು.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಸ್ಕ್ ಮತ್ತು ಬೆಜೋಸ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ಧಾರೆ. ಬೆಜೋಸ್ 2021 ರಲ್ಲಿ ತಮ್ಮ ಬ್ಲೂ ಒರಿಜಿನ್ ರಾಕೆಟ್ ಮೂಲಕ ಬಾಹ್ಯಾಕಾಶ ಯಾನ ಮಾಡಿದ್ದರು. ಮಸ್ಕ್ ಅವರ ಸ್ಪೇಸ್ಎಕ್ಸ್ ತನ್ನದೇ ಆದ ಅನೇಕ ರಾಕೆಟ್ಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ ಮತ್ತು ಅಮೆರಿಕ ಗುಪ್ತಚರ ಮತ್ತು ಮಿಲಿಟರಿ ಸಂಸ್ಥೆಗಳೊಂದಿಗೆ ತನ್ನ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ.
ಇದನ್ನೂ ಓದಿ : ಲಾವಾ 'ಬ್ಲೇಜ್ ಕರ್ವ್ 5ಜಿ' ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?