ಬರ್ಲಿನ್: ಇರಾನ್ ಸರ್ಕಾರದ ಸಿದ್ಧಾಂತಗಳನ್ನು ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪನ್ನು ಬೆಂಬಲಿಸಿದ ಆರೋಪ ಹೊತ್ತಿರುವ ಹ್ಯಾಂಬರ್ಗ್ ಮೂಲದ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯನ್ನು ಜರ್ಮನಿ ಸರ್ಕಾರ ಬುಧವಾರ ನಿಷೇಧಿಸಿದೆ. ಮೂಲಭೂತವಾದಿ ಸಂಘಟನೆಗೆ ಸೇರಿದ 53 ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ನವೆಂಬರ್ನಿಂದ ಜರ್ಮನಿಯಾದ್ಯಂತ ಹರಡಿರುವ ಇಸ್ಲಾಮಿಕ್ ಸೆಂಟರ್ ಹ್ಯಾಂಬರ್ಗ್ (Islamic Centre Hamburg) ಅಥವಾ ಐಜೆಡ್ಎಚ್ (IZH) ಹೆಸರಿನ ಸಂಘಟನೆ ಹಾಗೂ ಅದರ ಉಪ ಸಂಘಟನೆಗಳ ಕಚೇರಿಗಳ ದಾಳಿ ನಡೆಸಲಾಗುತ್ತಿದೆ. ಸಂಘಟನೆಯು ಗಂಭೀರ ಸ್ವರೂಪದ ಸಂಶಯಾಸ್ಪದ ಕೃತ್ಯಗಳಲ್ಲಿ ತೊಡಗಿರುವುದು ದೃಢಪಟ್ಟಿರುವುದರಿಂದ ಅದರ ಮೇಲೆ ನಿಷೇಧ ಹೇರಲಾಗಿದೆ ಆಂತರಿಕ ಸಚಿವೆ ನ್ಯಾನ್ಸಿ ಫೈಸರ್ ಹೇಳಿದ್ದಾರೆ.
ಐಝೆಡ್ಎಚ್ ಸಂಘಟನೆಯು ಜರ್ಮನಿಯಲ್ಲಿ ಇಸ್ಲಾಮಿಸ್ಟ್-ಉಗ್ರಗಾಮಿ, ನಿರಂಕುಶ ಸಿದ್ಧಾಂತಗಳನ್ನು ಉತ್ತೇಜಿಸುತ್ತಿದೆ. ಅಲ್ಲದೆ ಸಂಘಟನೆ ಮತ್ತು ಅದರ ಉಪ ಸಂಘಟನೆಗಳು ಹಿಜ್ಬುಲ್ಲಾ ಭಯೋತ್ಪಾದಕರನ್ನು ಬೆಂಬಲಿಸುತ್ತಿವೆ ಮತ್ತು ಯಹೂದಿ ವಿರೋಧಿ ದ್ವೇಷ ಭಾವನೆಗಳನ್ನು ಹರಡುತ್ತಿವೆ ಎಂದು ಫೈಸರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ಲಾಮಿಕ್ ಕ್ರಾಂತಿಯ ಇರಾನ್ನ ಸರ್ವೋಚ್ಚ ನಾಯಕನ ನೇರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಐಜೆಡ್ಎಚ್ ಇಸ್ಲಾಮಿಕ್ ಕ್ರಾಂತಿಯ ಸಿದ್ಧಾಂತವನ್ನು ಆಕ್ರಮಣಕಾರಿ ಮತ್ತು ಉಗ್ರಗಾಮಿಗಳ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ ಮತ್ತು ಜರ್ಮನಿ ದೇಶದಲ್ಲಿ ಅಂಥದೇ ಇಸ್ಲಾಮಿಕ್ ಕ್ರಾಂತಿಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ. ಅಲ್ಲದೆ ಈ ಸಂಘಟನೆಯ ಸಿದ್ಧಾಂತವು ಮಹಿಳೆಯರ ಹಕ್ಕುಗಳು, ಸ್ವತಂತ್ರ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ಜರ್ಮನ್ ದೇಶವನ್ನು ನಾಶ ಮಾಡುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯ ಹೇಳಿದೆ.
ಹ್ಯಾಂಬರ್ಗ್ನಲ್ಲಿ ಮಸೀದಿಯೊಂದನ್ನು ನಿರ್ವಹಣೆ ಮಾಡುತ್ತಿರುವ ಈ ಗುಂಪಿನ ಚಟುವಟಿಕೆಗಳ ಮೇಲೆ ಜರ್ಮನಿಯ ದೇಶೀಯ ಗುಪ್ತಚರ ಸಂಸ್ಥೆಗಳು ದೀರ್ಘಕಾಲದಿಂದ ಕಣ್ಣಿಟ್ಟಿವೆ. ಕೆಲ ತಿಂಗಳುಗಳ ಹಿಂದೆ ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದ್ದ ಐಜೆಡ್ಎಚ್, ತಾನು ಎಲ್ಲಾ ರೀತಿಯ ಹಿಂಸಾಚಾರ ಮತ್ತು ಉಗ್ರವಾದವನ್ನು ಖಂಡಿಸುವುದಾಗಿ ಮತ್ತು ಯಾವಾಗಲೂ ಶಾಂತಿ, ಸಹಿಷ್ಣುತೆ ಮತ್ತು ಅಂತರ್ಧರ್ಮೀಯ ಸಂವಾದವನ್ನು ಬೆಂಬಲಿಸುವುದಾಗಿ ಹೇಳಿತ್ತು.
ನಿಷೇಧದ ನಂತರ ಜರ್ಮನಿಯ ನಾಲ್ಕು ಶಿಯಾ ಮಸೀದಿಗಳನ್ನು ಮುಚ್ಚಲಾಗುವುದು ಮತ್ತು ಐಜೆಡ್ಎಚ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಬರ್ಲಿನ್ ನಲ್ಲಿರುವ ಅಮೆರಿಕನ್ ಯಹೂದಿ ಸಮಿತಿಯು ನಿಷೇಧವನ್ನು ಸ್ವಾಗತಿಸಿದ್ದು, ಆಕ್ರಮಣಕಾರಿ ಯಹೂದಿ-ವಿರೋಧಿ ಭಾವನೆಯನ್ನು ಹರಡುವ ಮತ್ತು ಹಿಜ್ಬುಲ್ಲಾ ಉಗ್ರರೊಂದಿಗೆ ಸಂಯೋಜಿತವಾಗಿರುವ ಭಯೋತ್ಪಾದಕರನ್ನು ನಿಷೇಧಿಸಿರುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.