ನವದೆಹಲಿ: ಶಾಂತಿ ಮಾತುಕತೆಗಳು ನಿರೀಕ್ಷಿತ ಫಲ ನೀಡದ ಕಾರಣದಿಂದ ವೆಸ್ಟ್ ಬ್ಯಾಂಕ್ ಮತ್ತು ಟೆಂಪಲ್ ಮೌಂಟ್ ಪ್ರದೇಶಗಳಲ್ಲಿನ ಯುದ್ಧದ ಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ರೇಲ್ನ ಯುದ್ಧ ಕ್ಯಾಬಿನೆಟ್ ಹೇಳಿದೆ. ಯುದ್ಧ ಕ್ಯಾಬಿನೆಟ್ನ ತುರ್ತು ಸಭೆ ಭಾನುವಾರ ನಡೆದಿದ್ದು, ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ವೆಸ್ಟ್ ಬ್ಯಾಂಕ್ ಮತ್ತು ಟೆಂಪಲ್ ಮೌಂಟ್ ಈ ಪ್ರದೇಶಗಳಲ್ಲಿ ಸೈನ್ಯ ಬಲವನ್ನು ಹೆಚ್ಚಿಸಲು ನಿರ್ಧರಿಸಲಾಯಿತು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ವೆಸ್ಟ್ ಬ್ಯಾಂಕ್ ಮತ್ತು ಟೆಂಪಲ್ ಮೌಂಟ್ನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಹಿಜ್ಬುಲ್ಲಾ ಪಡೆಗಳು ಸಹ ಇಸ್ರೇಲ್ ವಿರುದ್ಧ ಹೋರಾಟಕ್ಕಿಳಿಯುವ ಸಾಧ್ಯತೆಯಿದೆ ಎಂದು ಇಸ್ರೇಲಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯಸ್ಥಿಕೆ ರಾಷ್ಟ್ರಗಳಿಗೆ ಕದನ ವಿರಾಮ ಮಾತುಕತೆಗೆ ನಿಯೋಗಗಳನ್ನು ಕಳುಹಿಸುವುದಿಲ್ಲ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಕೈರೋ ಮತ್ತು ಪ್ಯಾರಿಸ್ನಲ್ಲಿ ಎರಡೂ ಪಕ್ಷಗಳ ಮಧ್ಯೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ ಎರಡೂ ಕಡೆಯವರು ಯಾವುದೇ ಒಪ್ಪಂದಕ್ಕೆ ಬರಲು ವಿಫಲರಾಗಿದ್ದಾರೆ.
ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಷರತ್ತಿಗೆ ಒಪ್ಪಿಕೊಳ್ಳುವವರೆಗೂ ಇಸ್ರೇಲ್ ಮತ್ತೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ. ಹಮಾಸ್ ವಶದಲ್ಲಿರುವ 134 ಒತ್ತೆಯಾಳುಗಳ ಪೈಕಿ ಕನಿಷ್ಠ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಆದಾಗ್ಯೂ, ಯುಎಸ್ ಅಧ್ಯಕ್ಷ ಜೋ ಬೈಡನ್ ಮಾರ್ಚ್ 10ರಂದು ರಂಜಾನ್ ತಿಂಗಳು ಪ್ರಾರಂಭವಾಗುವ ಮೊದಲು ಕದನ ವಿರಾಮ ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಕತಾರ್ ಮತ್ತು ಈಜಿಪ್ಟ್ನ ಮಧ್ಯಸ್ಥಿಕೆದಾರರು ಕೂಡ ಕದನವಿರಾಮಕ್ಕೆ ಒಪ್ಪಿಕೊಳ್ಳುವಂತೆ ಇಸ್ರೇಲ್ ಮತ್ತು ಹಮಾಸ್ ಎರಡಕ್ಕೂ ಒತ್ತಾಯಿಸುತ್ತಿದ್ದಾರೆ.
ರಂಜಾನ್ ತಿಂಗಳಲ್ಲಿ ಅಲ್-ಅಕ್ಸಾ ಮಸೀದಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವಂತೆ ಹಮಾಸ್ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಇತ್ತೀಚೆಗೆ ಪ್ಯಾಲೆಸ್ಟೈನಿಯರಿಗೆ ಕರೆ ನೀಡಿದ್ದಾನೆ. ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಇದು ಸ್ಪಷ್ಟ ಸಂದೇಶವಾಗಿದೆ ಎಂದು ಇಸ್ರೇಲ್ ಹೇಳಿದೆ. ಶಾಂತಿ ಮಾತುಕತೆಗಳಲ್ಲಿ ಪ್ರಸ್ತಾಪಿಸಲಾಗಿರುವ ಷರತ್ತುಗಳನ್ನು ಹಮಾಸ್ ಒಪ್ಪಿಕೊಳ್ಳಬೇಕು ಮತ್ತು ಕದನವಿರಾಮಕ್ಕೆ ಮುಂದಾಗಬೇಕೆಂದು ಅಮೆರಿಕದ ವೈಸ್ ಪ್ರೆಸಿಡೆಂಟ್ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆ