ಟೆಲ್ ಅವಿವ್ (ಇಸ್ರೇಲ್): ತನ್ನ ಮೇಲೆ ವೈಮಾನಿಕ ದಾಳಿ ಮಾಡಿದ ಇರಾನ್ ವಿರುದ್ಧ 'ಏಟಿಗೆ ಎದಿರೇಟು' ಎಂಬಂತೆ ಮರುದಾಳಿ ಮಾಡಬೇಕು ಎಂದು ಇಸ್ರೇಲ್ನ ಮಂತ್ರಿಗಳು ಆಕ್ರೋಶಭರಿತ ಮಾತನ್ನಾಡಿದ್ದರೆ, ಇದನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ತಿರಸ್ಕರಿಸಿದ್ದಾರೆ.
ಏಪ್ರಿಲ್ 14 ರಂದು ಇರಾನ್ ನೂರಾರು ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಬಿಟ್ಟು ದಾಳಿ ಮಾಡಿತ್ತು. ಇದನ್ನು ಇಸ್ರೇಲ್ ಅತ್ಯಂತ ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಇದಕ್ಕೆ ಅಮೆರಿಕ ಕೂಡ ನೆರವು ನೀಡಿತ್ತು. ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ಮಧ್ಯೆ ತೀವ್ರ ಬಿಕ್ಕಟ್ಟು ಉಂಟಾಗಿತ್ತು.
ಇಸ್ರೇಲ್ ಈಗಾಗಲೇ ಹಮಾಸ್ ವಿರುದ್ಧ ಯುದ್ಧ ನಡೆಸುತ್ತಿದೆ. ಇದರ ಮಧ್ಯೆ ಇರಾನ್ ಕೂಡ ದಾಳಿ ನಡೆಸಿದೆ. ಕೆಲ ದಿನಗಳ ಹಿಂದೆ ಸಿರಿಯಾದಲ್ಲಿದ್ದ ಇರಾನ್‌ನ ರಾಯಭಾಗಿ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿತ್ತು. ಅದರಲ್ಲಿ ರಾಯಭಾರಿಗಳು ಸೇರಿದಂತೆ 6 ಮಂದಿ ಹಿರಿಯ ಅಧಿಕಾರಿಗಳು ಸಾವಿಗೀಡಾಗಿದ್ದರು. ಇದು ಇಸ್ರೇಲ್ ನಡೆಸಿದ ಕೃತ್ಯ ಎಂದು ಇರಾನ್ ಆರೋಪಿಸಿ, ಇದಕ್ಕೆ ಪ್ರತಿಯಾಗಿ ವೈಮಾನಿಕ ದಾಳಿ ನಡೆಸಿತ್ತು.
ಇದು ಇಸ್ರೇಲ್ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ದೇಶದ ವಿರುದ್ಧ ದಾಳಿ ಮಾಡಿದ ಇರಾನ್ಗೆ ಬುದ್ಧಿ ಕಲಿಸಲು ಮರು ದಾಳಿ ಮಾಡಬೇಕು ಎಂದು ವಾರ್ ಕ್ಯಾಬಿನೆಟ್ ಸಲಹೆ ನೀಡಿದೆ. ಆದರೆ, ಇದನ್ನು ಪ್ರಧಾನಿ, ಸೇನಾ ಮುಖ್ಯಸ್ಥ ಮತ್ತು ರಕ್ಷಣಾ ಸಚಿವರು ತಿರಸ್ಕರಿಸಿದ್ದಾರೆ. ಇದರಿಂದ ದೇಶದ ರಕ್ಷಣಾ ವ್ಯವಸ್ಥೆಗ ಆತಂಕ ಎಂದು ಹೇಳಿದ್ದಾರೆ.
ಕಾದು ನೋಡುವ ತಂತ್ರ: ಇರಾನ್ ದಾಳಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವ ಬದಲು ಕಾದು ನೋಡುವ ತಂತ್ರಕ್ಕೆ ಇಸ್ರೇಲ್ ಮೊರೆ ಹೋಗಿದೆ. ಜೊತೆಗೆ ಈ ದಾಳಿಯನ್ನು ಹತ್ತಿಕ್ಕುವಲ್ಲಿ ನೆರವಾದ ಅಮೆರಿಕ, ಬ್ರಿಟನ್, ಫ್ರಾನ್ಸ್ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸಿದೆ. ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಅವರು, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್ ಮತ್ತು ಫ್ರೆಂಚ್ ವಿದೇಶಾಂಗ ಸಚಿವ ಸ್ಟೀಫನ್ ಸೆಜರ್ನೆ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆ. ಬೆಂಬಲ ಮತ್ತು ಸಹಾಯಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಇಸ್ರೇಲ್ ತನ್ನ ನಾಗರಿಕರ ರಕ್ಷಣೆಗೆ ಬದ್ಧವಾಗಿದೆ. ಇರಾನ್‌ನ ವೈಮಾನಿಕ ದಾಳಿಗೆ ಪ್ರತಿಯಾಗಿ ಆತ್ಮರಕ್ಷಣೆ ದಾಳಿಯನ್ನು ಮಾಡುವ ಹಕ್ಕನ್ನು ಇಸ್ರೇಲ್ ಹೊಂದಿದೆ. ಮುಂದೆ ಇರಾನ್ ತನ್ನ ಆಕ್ರಮಣಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸಿರಿಯಾ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ಇರಾನ್ - iran attacks israel