ಗಾಜಾ/ಟೆಲ್ ಅವೀವ್ : ದಕ್ಷಿಣ ಗಾಜಾ ಪಟ್ಟಿಯ ರಫಾ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲಿ ಪಡೆಗಳು ತೀವ್ರಗೊಳಿಸಿದ್ದು, ಈ ಪ್ರದೇಶದಲ್ಲಿ ಗಾಜಾದಿಂದ ಈಜಿಪ್ಟ್ ಅನ್ನು ಸಂಪರ್ಕಿಸುವ ಹಲವಾರು ಕಳ್ಳಸಾಗಣೆ ಸುರಂಗಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಸೇನಾ ರೇಡಿಯೋ ಭಾನುವಾರ ವರದಿ ಮಾಡಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ದಾಳಿ ಮಾಡಲು ಬಳಸಲಾದ ಸುರಂಗಗಳು ಸಹ ಪತ್ತೆಯಾಗಿವೆ. ಇದರಲ್ಲಿನ ಕೆಲ ಸುರಂಗಗಳು ಈಗಾಗಲೇ ಧ್ವಂಸವಾಗಿವೆ. ಅಂದಿನ ದಾಳಿಯಲ್ಲಿ 1200ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಹತ್ಯೆಗೀಡಾಗಿದ್ದರು.
ಹದಿನೈದು ದಿನಗಳ ಹಿಂದೆ ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಸುಮಾರು 8 ಲಕ್ಷ ಜನರು ನಗರವನ್ನು ತೊರೆದಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜೀಸ್ ಇನ್ ದಿ ನಿಯರ್ ಈಸ್ಟ್ (ಯುಎನ್ಆರ್ಡಬ್ಲ್ಯೂಎ) ಹೇಳಿದೆ.
ರಫಾದಲ್ಲಿ ಈಗಲೂ ಕೊನೆಯ ಹಮಾಸ್ ಬೆಟಾಲಿಯನ್ಗಳು ಅಸ್ತಿತ್ವದಲ್ಲಿವೆ ಎಂದು ಇಸ್ರೇಲ್ ನಂಬಿದ್ದು, ಅವುಗಳನ್ನು ನಾಶಪಡಿಸುವುದು ತನ್ನ ಆದ್ಯತೆಯಾಗಿದೆ ಎಂದು ಅದು ಹೇಳಿದೆ.
ನುಸೆರಾತ್ ಮೇಲಿನ ಇಸ್ರೇಲ್ ದಾಳಿಯಲ್ಲಿ 24 ಜನ ಸಾವು: ಗಾಜಾ ಪಟ್ಟಿಯ ಕೇಂದ್ರ ಭಾಗದಲ್ಲಿರುವ ನುಸೆರಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ವರದಿಗಳು ತಿಳಿಸಿವೆ. ಭಾನುವಾರ ರಾತ್ರಿ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 24 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಹಮಾಸ್ ಚಳವಳಿಯ ನಿಯಂತ್ರಣದಲ್ಲಿರುವ ಆರೋಗ್ಯ ಪ್ರಾಧಿಕಾರ ಹೇಳಿದೆ. ಏತನ್ಮಧ್ಯೆ, ವರದಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.
ಇದಲ್ಲದೆ, ಕೇಂದ್ರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ಉದ್ದೇಶಿತ ದಾಳಿಯಲ್ಲಿ ಹಮಾಸ್ ಪೊಲೀಸ್ ಇಲಾಖೆಯ ಹಿರಿಯ ಸದಸ್ಯ ಮತ್ತು ಅವರ ಸಹಚರರು ಸಹ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಒಂದು ವಾರದವರೆಗೆ ನುಸೆರಾತ್ನಲ್ಲಿ ತನ್ನ ಸೈನ್ಯ ನಿಯೋಜಿಸಿದ್ದ ಇಸ್ರೇಲ್ ಮತ್ತೆ ಹಿಂಪಡೆದಿತ್ತು.
ಆರೋಗ್ಯ ಅಧಿಕಾರಿಗಳ ಪ್ರಕಾರ ಯುದ್ಧದಿಂದ ಈವರೆಗೆ 35,386 ಪ್ಯಾಲೆಸ್ಟೈನಿಯರು ಕೊಲ್ಲಲ್ಪಟ್ಟಿದ್ದಾರೆ. ಆದಾಗ್ಯೂ ಸ್ವತಂತ್ರವಾಗಿ ಪರಿಶೀಲಿಸಲು ಅಸಾಧ್ಯವಾದ ಈ ಸಂಖ್ಯೆಯು, ಮೃತರಲ್ಲಿ ನಾಗರಿಕರು ಎಷ್ಟು ಜನ ಮತ್ತು ಹೋರಾಟಗಾರರು ಎಷ್ಟು ಜನ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಿಲ್ಲ.
ಇದನ್ನೂ ಓದಿ : ಐಡಿಎಫ್ ವೈಮಾನಿಕ ದಾಳಿಯಲ್ಲಿ ಪಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ನಾಯಕ ಸಾವು - ISRAEL KILLS ISLAMIC JIHAD LEADER