ಗಾಜಾ: ಗಾಜಾ ಪಟ್ಟಿಯ ದಕ್ಷಿಣದ ತುದಿಯ ನಗರವಾದ ವಾಯವ್ಯ ರಫಾದಲ್ಲಿನ ಕ್ಯಾಂಪ್ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೈನ್ ಮಾಧ್ಯಮಗಳು ವರದಿ ಮಾಡಿವೆ.
ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಏಜೆನ್ಸಿಯ (ಯುಎನ್ ಆರ್ ಡಬ್ಲ್ಯೂಎ) ಗೋದಾಮುಗಳ ಬಳಿ ಸ್ಥಳಾಂತರಗೊಂಡ ಸಾವಿರಾರು ಜನರಿಂದ ತುಂಬಿರುವ ಹೊಸದಾಗಿ ಸ್ಥಾಪಿಸಲಾದ ಶಿಬಿರದ ಡೇರೆಗಳ ಮೇಲೆ ಇಸ್ರೇಲ್ ಪಡೆಗಳು ಸುಮಾರು ಎಂಟು ರಾಕೆಟ್ ಗಳನ್ನು ಹಾರಿಸಿವೆ ಎಂದು ಪ್ಯಾಲೆಸ್ಟೈನ್ ಅಧಿಕೃತ ಸುದ್ದಿ ಸಂಸ್ಥೆ ವಾಫಾ (WAFA) ವರದಿ ಮಾಡಿದೆ.
ಸ್ಥಳಾಂತರಗೊಂಡ ಕುಟುಂಬಗಳು ವಾಸಿಸುವ ಜನನಿಬಿಡ ಪ್ರದೇಶದ ಮೇಲೆ ಇಸ್ರೇಲಿ ಸೈನಿಕರು ತೀವ್ರ ಸ್ವರೂಪದ ವೈಮಾನಿಕ ದಾಳಿ ನಡೆಸಿದ್ದಾರೆ. ದಾಳಿಯಿಂದ ಪ್ಲಾಸ್ಟಿಕ್ ಮತ್ತು ತಗಡಿನಿಂದ ಮಾಡಲಾದ ಡೇರೆಗಳು ಮತ್ತು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಫೇಸ್ಬುಕ್ನಲ್ಲಿ ಪ್ರಸಾರವಾದ ವೀಡಿಯೊ ತುಣುಕುಗಳಲ್ಲಿ ಈ ಪ್ರದೇಶದಲ್ಲಿ ಜ್ವಾಲೆಗಳು ತೀವ್ರವಾಗಿ ಏರುತ್ತಿರುವುದು ಮತ್ತು ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರು ವಾಸಿಸುವ ಡೇರೆಗಳಿಗೆ ಬೆಂಕಿ ವ್ಯಾಪಿಸುತ್ತಿರುವುದು ಕಾಣಿಸುತ್ತದೆ.
ಈ ಪ್ರದೇಶವು ಏರಿಳಿತಗಳಿಂದ ಕೂಡಿರುವುದರಿಂದ ಶವಗಳನ್ನು ಹೊರತೆಗೆಯುವಲ್ಲಿ ನಾಗರಿಕ ರಕ್ಷಣಾ ಪಡೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಬಹಳಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಗಾಜಾ ನಿವಾಸಿಗಳಿಂದ ಕಿಕ್ಕಿರಿದು ತುಂಬಿರುವ ಈ ಪ್ರದೇಶವನ್ನು ದಾಳಿಯ ಮೊದಲು ಇಸ್ರೇಲಿ ಸೇನೆಯು "ಸುರಕ್ಷಿತ ಪ್ರದೇಶ" ಎಂದು ವರ್ಗೀಕರಿಸಿತ್ತು ಎಂದು ಪ್ಯಾಲೆಸ್ಟೈನ್ ಭದ್ರತಾ ಮೂಲಗಳು ಕ್ಸಿನ್ಹುವಾಗೆ ತಿಳಿಸಿವೆ.
"ರಫಾ ವಿರುದ್ಧದ ಆಕ್ರಮಣವನ್ನು ನಿಲ್ಲಿಸುವಂತೆ ಸೂಚಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ಧಾರವನ್ನು ಇಸ್ರೇಲ್ ಸಂಪೂರ್ಣವಾಗಿ ಧಿಕ್ಕರಿಸಿದೆ ಮತ್ತು ನಿರ್ಲಕ್ಷಿಸಿದೆ" ಎಂದು ಹಮಾಸ್ ಭಾನುವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಾಂಬ್ ದಾಳಿಯನ್ನು ಖಂಡಿಸಿದೆ.
"ಹಮಾಸ್ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದ ಕಾಂಪೌಂಡ್ ಮೇಲೆ ಇಸ್ರೇಲ್ ವಿಮಾನಗಳು ದಾಳಿ ನಡೆಸಿವೆ" ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿದೆ. "ನಿಖರವಾದ ಶಸ್ತ್ರಾಸ್ತ್ರಗಳನ್ನು ಬಳಸಿ ಮತ್ತು ಹಮಾಸ್ ಈ ಪ್ರದೇಶವನ್ನು ಬಳಸುತ್ತಿದೆ ಎಂಬುದನ್ನು ಸೂಚಿಸುವ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿಯೇ ಈ ದಾಳಿಯನ್ನು ನಡೆಸಲಾಗಿದೆ" ಎಂದು ಅದು ಹೇಳಿದೆ.
ಹಮಾಸ್ ಸಶಸ್ತ್ರ ವಿಭಾಗವಾದ ಅಲ್-ಖಾಸ್ಸಾಮ್ ಬ್ರಿಗೇಡ್ಸ್ ರಫಾದಿಂದ ಮಧ್ಯ ಇಸ್ರೇಲ್ನ ಕರಾವಳಿ ನಗರ ಟೆಲ್ ಅವೀವ್ ಕಡೆಗೆ ದೊಡ್ಡ ಪ್ರಮಾಣದ ರಾಕೆಟ್ ದಾಳಿಯನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳ ನಂತರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಇದನ್ನೂ ಓದಿ: ನೌಕರಿ ಆಸೆಯಿಂದ ಲಾವೋಸ್ನಲ್ಲಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರ ರಕ್ಷಣೆ - Indians Rescued from Laos