ಬಾಗ್ದಾದ್ (ಇರಾಕ್): ಇರಾಕ್ ಮತ್ತು ಸಿರಿಯಾ ಎರಡರಲ್ಲೂ ಮಿಲಿಟರಿ ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ವೈಮಾನಿಕ ದಾಳಿ ಮಾಡಿರುವ ಇರಾಕ್ ಸಶಸ್ತ್ರ ಪಡೆಗಳ ಕಮಾಂಡರ್ - ಇನ್ - ಚೀಫ್ ವಕ್ತಾರ ಪ್ರತಿಕ್ರಿಯಿಸಿದ್ದಾರೆ. ''ಇರಾಕ್ ಪ್ರಯಾಸಪಡುತ್ತಿರುವ ಸಮಯದಲ್ಲಿ ಈ ದಾಳಿಗಳು ನಡೆದಿವೆ. ಈ ದಾಳಿಗಳು ಇರಾಕ್ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇರಾಕ್ ಸರ್ಕಾರದ ಪ್ರಯತ್ನಗಳನ್ನು ಇದು ದುರ್ಬಲಗೊಳಿಸಿದೆ'' ಎಂದು ಅವರು ಕಿಡಿಕಾರಿದ್ದಾರೆ.
''ಅಮೆರಿಕ ವೈಮಾನಿಕ ದಾಳಿಗಳ ಮೂಲಕ ಇರಾಕ್ ಪ್ರದೇಶವನ್ನು ಅನಪೇಕ್ಷಿತ ಪರಿಣಾಮಗಳಿಗೆ ಎಳೆಯುವ ಬೆದರಿಕೆಯಾಗಿದೆ. ಇದರ ಪರಿಣಾಮಗಳು ಇರಾಕ್ನ ಪ್ರದೇಶಗಳಲ್ಲಿ ಭದ್ರತೆ ಮತ್ತು ಸ್ಥಿರತೆಗೆ ದೊಡ್ಡ ಹೊಡೆತ ನೀಡಿದೆ '' ಎಂದು ಇರಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಸ್ಥಳೀಯ ಔಟ್ಲೆಟ್ ಇರಾಕಿ ನ್ಯೂಸ್ ಏಜೆನ್ಸಿ ಅನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
ಅಲ್ ಜಜೀರಾ ಪ್ರಕಾರ, ಸಿರಿಯಾದ ಮರುಭೂಮಿ ಪ್ರದೇಶಗಳು ಮತ್ತು ಸಿರಿಯನ್ - ಇರಾಕ್ ಗಡಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ದಾಳಿಗಳನ್ನು ಮಾಡುತ್ತಿದೆ ಎಂದು ಸಿರಿಯನ್ ರಾಜ್ಯ ಮಾಧ್ಯಮ ಆರೋಪಿಸಿದೆ. ಇದರ ಪರಿಣಾಮವಾಗಿ ಅನೇಕ ಸಾವುನೋವುಗಳು ಸಂಭವಿಸಿವೆ. ಕಳೆದ ವಾರ, ಇರಾಕ್‌ನಲ್ಲಿ ಇಸ್ಲಾಮಿಕ್ ರೆಸಿಸ್ಟೆನ್ಸ್, ಕಟಾಯ್ಬ್ ಹೆಜ್ಬುಲ್ಲಾ ಮತ್ತು ಹರಕತ್ ಅಲ್-ನುಜಾಬಾದಂತಹ ಸೇನಾಪಡೆಗಳನ್ನು ಒಳಗೊಂಡ ಒಕ್ಕೂಟವು ಡ್ರೋನ್ ದಾಳಿ ಮಾಡಿದ್ದರಿಂದ, ಮೂವರು ಅಮೆರಿಕ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು. ಜೊತೆಗೆ ಸಿರಿಯನ್ ಗಡಿಗೆ ಸಮೀಪವಿರುವ ಈಶಾನ್ಯ ಜೋರ್ಡಾನ್‌ನಲ್ಲಿನ ನೆಲೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.
ಅಮೆರಿಕದಿಂದ ಪ್ರತೀಕಾರದ ದಾಳಿ: ಜೋರ್ಡಾನ್‌ನಲ್ಲಿರುವ ತನ್ನ ಶಿಬಿರದ ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ (ಯುಎಸ್‌ಎ) ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದೆ. ಅಮೆರಿಕದ ಯುದ್ಧವಿಮಾನಗಳು ಇರಾನ್ ಬೆಂಬಲಿತ ಉಗ್ರಗಾಮಿಗಳು ಮತ್ತು ಇರಾಕ್ ಮತ್ತು ಸಿರಿಯಾದಲ್ಲಿನ ಇರಾನ್ ಕ್ರಾಂತಿಕಾರಿ ಗಾರ್ಡ್‌ಗಳ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ಶಿಬಿರದ ಮೇಲೆ ಇತ್ತೀಚೆಗೆ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಅಮೆರಿಕ ತೀವ್ರವಾಗಿ ಪ್ರತಿಕ್ರಿಯಿಸಿದೆ. ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಸಚಿವರು ಪ್ರತೀಕಾರದ ದಾಳಿಯ ಎಚ್ಚರಿಕೆ ನೀಡಿದ್ದರು. ಅದರಂತೆ ಯೋಜನೆ ರೂಪಿಸುವುದಾಗಿ ಬೈಡನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಡ್ರೋನ್ ದಾಳಿಯಲ್ಲಿ ಮಡಿದ ಯೋಧರ ಕುಟುಂಬಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಪ್ರಮುಖ ಘೋಷಣೆಯೊಂದನ್ನು ಮಾಡಿದ್ದರು, ''ಅಮೆರಿಕ ದೇಶವು ಮಧ್ಯಪ್ರಾಚ್ಯದಲ್ಲಿ ಘರ್ಷಣೆಯನ್ನು ಬಯಸುವುದಿಲ್ಲ. ಆದರೆ, ನೀವು ಅಮೆರಿಕನ್ನರಿಗೆ ಹಾನಿ ಮಾಡಿದರೆ, ನಾವು ಪ್ರತಿಕ್ರಿಯಿಸುತ್ತೇವೆ" ಎಂದು ಹೇಳಿದ್ದರು. "ನನ್ನ ಆದೇಶದ ಪ್ರಕಾರ, ಅಮೆರಿಕ ಪಡೆಗಳು ಇರಾಕ್ ಮತ್ತು ಸಿರಿಯಾದಲ್ಲಿನ ಶತ್ರು ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ನಾವು ಆಯ್ಕೆ ಮಾಡಿದ ಸ್ಥಳಗಳಲ್ಲಿ ದಾಳಿ ಮುಂದುವರಿಯಲಿದೆ'' ಎಂದು ಅವರು ತಿಳಿಸಿದ್ದರು. ಅಮೆರಿಕ ಸೆಂಟ್ರಲ್ ಕಮಾಂಡ್ ಪ್ರಕಾರ, ಈ ದಾಳಿಗಳು ಸ್ಥಳೀಯ ಕಾಲಮಾನ ಸುಮಾರು 4 ಗಂಟೆಗೆ ನಡೆದಿವೆ. ಒಟ್ಟು 85 ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ದೀರ್ಘ-ಶ್ರೇಣಿಯ ಬಾಂಬ್ಗಳ ಮೂಲಕ ವೈಮಾನಿಕ ದಾಳಿಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಇಸ್ರೇಲ್ - ಹಮಾಸ್ ಸಂಘರ್ಷ: ಈಜಿಪ್ಟ್ನಲ್ಲಿ ಶಾಂತಿ ಮಾತುಕತೆ ಆರಂಭಿಸಿದ ಹಮಾಸ್