ಬಾಗ್ದಾದ್ (ಇರಾಕ್) : ಸಲಿಂಗಕಾಮವು ಇನ್ನು ಮುಂದೆ ಇರಾಕ್ನಲ್ಲಿ ಅಪರಾಧವೆಂದು ಪರಿಗಣಿತವಾಗಲಿದೆ. ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ಇರಾಕ್ ಸಂಸತ್ತು ಅಂಗೀಕರಿಸಿದೆ. ಸಲಿಂಗಕಾಮದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವನೆ ಹೊಸ ಕಾನೂನಿನಲ್ಲಿದೆ.
ಸಲಿಂಗಕಾಮಕ್ಕೆ 10 ರಿಂದ 15 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮತ್ತು ವೇಶ್ಯಾವಾಟಿಕೆ ಹಾಗೂ ಸಲಿಂಗ ಸಂಬಂಧಗಳನ್ನು ಯಾವುದೇ ರೀತಿಯಲ್ಲಿ ಉತ್ತೇಜಿಸುವುದನ್ನು ನಿಷೇಧಿಸುವ 1988 ರ ವೇಶ್ಯಾವಾಟಿಕೆ ವಿರೋಧಿ ಕಾನೂನಿನ ತಿದ್ದುಪಡಿಗೆ ಇರಾಕ್ ಸಂಸತ್ತು ಶನಿವಾರ ಮತ ಚಲಾಯಿಸಿತು.
ಇರಾಕ್ ಸಂಸತ್ತಿನ ಹಂಗಾಮಿ ಮುಖ್ಯಸ್ಥ ಮೊಹ್ಸೆನ್ ಅಲ್-ಮಂಡಲವಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಸಮಾಜದ ಮೌಲ್ಯಗಳನ್ನು ರಕ್ಷಿಸಲು, ನೈತಿಕ ಅಧಃಪತನ ಮತ್ತು ಸಲಿಂಗಕಾಮದ ಕ್ರಿಯೆಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಹಾಗೂ ರಾಷ್ಟ್ರದ ಸರ್ವೋಚ್ಚ ಹಿತಾಸಕ್ತಿಯನ್ನು ರಕ್ಷಿಸಲು ಇದು ಅತ್ಯಗತ್ಯ ಹೆಜ್ಜೆಯಾಗಿದೆ" ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರಂಭಿಕ ಕರಡು ಮಸೂದೆಯಲ್ಲಿ ಸಲಿಂಗ ಕಾಮಕ್ಕೆ ಮರಣದಂಡನೆ ವಿಧಿಸಲು ಪ್ರಸ್ತಾಪಿಸಲಾಗಿತ್ತು, ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ರಾಷ್ಟ್ರಗಳ ಬಲವಾದ ವಿರೋಧದ ನಂತರ ಅಂಗೀಕರಿಸುವ ಮೊದಲು ಅದನ್ನು ತಿದ್ದುಪಡಿ ಮಾಡಲಾಯಿತು ಎಂದು ಇರಾಕ್ನ ಸ್ವತಂತ್ರ ಪೋರ್ಟಲ್ ಅಲ್ ಸುಮಾರಿಯಾ ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಇರಾಕ್ ನಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿರಲಿಲ್ಲ.
ಸಲಿಂಗಕಾಮ ನಿಷೇಧಿಸುವ ಇರಾಕ್ನ ಕ್ರಮಕ್ಕೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿದೆ. "ಎಲ್ಜಿಬಿಟಿ ಸಮುದಾಯದ ವಿರುದ್ಧದ ದ್ವೇಷ ಹುಟ್ಟು ಹಾಕುವ ಇರಾಕ್ನ ಕ್ರಮಗಳು ಭಯಾನಕ ಬೆಳವಣಿಗೆಗಳಾಗಿವೆ" ಎಂದು ಮಾನವ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್ ನ್ಯಾಷನಲ್ನ ಇರಾಕ್ ಸಂಶೋಧಕ ರಾಜ್ ಸಲಾಯಿ ಹೇಳಿದ್ದಾರೆ.
ಇರಾಕ್ನ ಮಿತ್ರರಾಷ್ಟ್ರವಾಗಿರುವ ಅಮೆರಿಕ ಕೂಡ ಇರಾಕ್ನ ಈ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. "ಈ ತಿದ್ದುಪಡಿಯು ಇರಾಕ್ ಸಮಾಜದಲ್ಲಿನ ದುರ್ಬಲರಿಗೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಇರಾಕ್ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವದ 60 ಕ್ಕೂ ಹೆಚ್ಚು ದೇಶಗಳಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಹಾಗೆಯೇ 130 ಕ್ಕೂ ಹೆಚ್ಚು ದೇಶಗಳಲ್ಲಿ ಸಲಿಂಗ ಲೈಂಗಿಕ ಕ್ರಿಯೆಗಳು ಕಾನೂನುಬದ್ಧವಾಗಿವೆ.
ಇದನ್ನೂ ಓದಿ : ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 3 ಕಿಲೋಮೀಟರ್ ಎತ್ತರಕ್ಕೆ ಚಿಮ್ಮಿದ ಬೂದಿ - VOLCANO ERUPTS