ಹೂಸ್ಟನ್, ಅಮೆರಿಕ: ದರೋಡೆ ಪ್ರಕರಣ ನಡೆದ ವೇಳೆ 32 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಗುಂಡು ಹಾರಿಸಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯವರಾದ ದಾಸರಿ ಗೋಪಿಕೃಷ್ಣ ಎಂಟು ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ತೆರಳಿದ್ದರು. ಜೂನ್ 21 ರಂದು ಡಲ್ಲಾಸ್‌ನ ಪ್ಲೆಸೆಂಟ್ ಗ್ರೋವ್‌ನಲ್ಲಿರುವ ಗ್ಯಾಸ್ ಸ್ಟೇಷನ್ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಈ ಘಟನೆ ಸಂಭವಿಸಿದೆ.
ಭಾನುವಾರ ಯೋಗ ದಿನದ ಕಾರ್ಯಕ್ರಮಕ್ಕಾಗಿ ಡಲ್ಲಾಸ್‌ನಲ್ಲಿದ್ದ ಕಾನ್ಸುಲ್ ಜನರಲ್ ಡಿ.ಸಿ. ಮಂಜುನಾಥ್ ಅವರು, ಈ ಹಿಂದೆ ವಿವಿಧ ಮೂಲಗಳು ವರದಿ ಮಾಡಿದಂತೆ ಅರ್ಕಾನ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿಗೂ ಹಾಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಮಾಧ್ಯಮಕ್ಕೆ ಖಚಿತಪಡಿಸಿದ್ದಾರೆ. ಗೋಪಿಕೃಷ್ಣ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ ಮಂಜುನಾಥ್ ಅವರು, "ಡಲ್ಲಾಸ್‌ನ ಪ್ಲಾಸೆಂಟ್ ಗ್ರೋವ್, ಟಿಎಕ್ಸ್‌ನಲ್ಲಿ ನಡೆದ ದರೋಡೆ ಘಟನೆಯಲ್ಲಿ ಭಾರತೀಯ ಪ್ರಜೆ ಗೋಪಿ ಕೃಷ್ಣ ದಾಸರಿ ಅವರ ದುರಂತ ನಿಧನದ ಬಗ್ಗೆ ತಿಳಿದು ನಮಗೆ ತುಂಬಾ ದುಃಖವಾಗಿದೆ. ಮೃತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದರು.
ಭಾರತೀಯ ಸಂಘಗಳ ಬೆಂಬಲದೊಂದಿಗೆ ಕಾನ್ಸುಲೇಟ್, ಶವಪರೀಕ್ಷೆ ಮತ್ತು ಮರಣ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಸ್ಥಳೀಯ ಔಪಚಾರಿಕ ಪ್ರಕ್ರಿಯೆ ನಂತರ ಗೋಪಿಕೃಷ್ಣ ಅವರ ದೇಹವನ್ನು ಭಾರತಕ್ಕೆ ತರಲು ಅನುಕೂಲವಾಗುವಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ. ದರೋಡೆ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಗೋಪಿಕೃಷ್ಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಈ ಘಟನೆಯು ಡಲ್ಲಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗೋಪಿಕೃಷ್ಣ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.