ನವದೆಹಲಿ: ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರ ಪತನದ ಬಳಿಕ ದೇಶ ತೊರೆದಿರುವ ಶೇಖ್ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಲು ಭಾರತ ಸರ್ಕಾರ ಅವಕಾಶ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯುಕೆಯಲ್ಲಿ ಆಶ್ರಯ ಪಡೆಯುವವರೆಗೆ ಅವರು ಭಾರತದಲ್ಲಿ ಇರಲಿದ್ದು, ಎಲ್ಲಾ ರೀತಿಯ ಬೆಂಬಲ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಸೀನಾ ವಾಸ್ತವ್ಯ ತಾತ್ಕಾಲಿಕವಾಗಿರಲಿದೆ. ಬ್ರಿಟನ್ಗೆ ಸ್ಥಳಾಂತರವಾಗುವವರೆಗೆ ಅವರು ನವದೆಹಲಿಯಲ್ಲಿ ಇರಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ವ್ಯಕ್ತವಾದ ಭಾರೀ ಪ್ರತಿಭಟನಾ ಹಿಂಸಾಚಾರದ ಹಿನ್ನಲೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಅವರು ಲಂಡನ್ನಲ್ಲಿ ನೆಲೆಯೂರುವ ಚಿಂತನೆ ನಡೆಸಿದ್ದಾರೆ. ಆದರೆ, ಅವರಿಗೆ ರಾಜಕೀಯ ಆಶ್ರಯ ನೀಡುವ ಬಗ್ಗೆ ಯುನೈಟೆಡ್ ಕಿಂಗಡಮ್ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ ಎನ್ನಲಾಗಿದೆ. ಅವರ ಸಹೋದರಿ ಯುಕೆ ಪೌರತ್ವ ಹೊಂದಿದ ಹಿನ್ನಲೆ ಅವರ ಜೊತೆಗೆ ನೆಲೆಸಲು ಬ್ರಿಟನ್ ಆಶ್ರಯ ಕೋರುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬಾಂಗ್ಲಾದೇಶದ ಪಿತಾಮಹ ಶೇಖ್ ಮಜಿಬುರ್ ರೆಹಮಾನ್ ಮತ್ತು ಶೇಖ್ ಫಜಿಲತುನ್ ನೆಚಾ ಮುಜಿಬ್ ಅವರ ಕಿರಿಯ ಮಗಳು ರೆಹನಾ ಶೇಖ್ ಹಸೀನಾ ಕಿರಿಯ ಸಹೋದರಿಯಾಗಿದ್ದಾರೆ. ಇವರ ಮಗಳು ಟುಲಿಪ್ ಸಿದ್ಧಿಕ್ ಬ್ರಿಟನ್ ಸಂಸತ್ನಲ್ಲಿ ಲೇಬರ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ನಡುವೆ ನವದೆಹಲಿ ಢಾಕಾದಲ್ಲಿ ವೇಗವಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಭಾರತ ಸರ್ಕಾರ ಮೂಲಗಳು ತಿಳಿಸಿದೆ. ಅತ್ತ ಢಾಕಾದಲ್ಲಿ ಸೋಮವಾರ ಮಧ್ಯಾಹ್ನ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ವಕೂರ್- ಉಜ್- ಜಾಮನ್, ಹಸೀನಾ ರಾಜೀನಾಮೆ ನೀಡಿದ್ದು, ಮಧ್ಯಂತರ ಸರ್ಕಾರ ಮುಂದಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಿದ್ದಾರೆ. ದೇಶದ ಒಳಿತಿಗಾಗಿ ಸಹಾಯ ಮಾಡಿ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು. ನಾನು ದೇಶದ ಜವಾಬ್ದಾರಿಯನ್ನು ಹೊರುತ್ತಿದ್ದು, ಸಹಕಾರ ನೀಡುವಂತೆ ಅವರು ಟಿವಿ ವಾಹಿನಿ ಮೂಲಕ ದೇಶದ ಜನರಿಗೆ ಮನವಿ ಮಾಡಿದರು.
ಬಾಂಗ್ಲಾದೇಶದಲ್ಲಿನ ವಿಪಕ್ಷ ನಾಯಕರನ್ನು ಭೇಟಿ ಮಾಡಿದ ಅವರು, ದೇಶದ ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು ಸೇನೆ ಹೊರಲಿದೆ. ಸಹಕಾರ ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಹಸೀನಾ ಸರ್ಕಾರದ ವಿರುದ್ಧ ತೀವ್ರವಾಗಿದ್ದ ಪ್ರತಿಭಟನೆಯಲ್ಲಿ 150ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದರು.
ಇದನ್ನೂ ಓದಿ: ಸಂಸತ್ ವಿಸರ್ಜಿಸಿ ಶೀಘ್ರ ಮಧ್ಯಂತರ ಸರ್ಕಾರ ರಚನೆ: ಮಾಜಿ ಪ್ರಧಾನಿ ಖಲೀದಾ ಜಿಯಾ ಬಿಡುಗಡೆಗೆ ಆದೇಶಿಸಿದ ಬಾಂಗ್ಲಾ ಅಧ್ಯಕ್ಷ