ರೋಮ್: ಇಟಲಿಯಲ್ಲಿ ಭಾರತ ಮೂಲದ ಕೃಷಿ ಕಾರ್ಮಿಕನೊಬ್ಬ ದುರಂತ ಸಾವು ಕಂಡಿದ್ದಾನೆ. ಕೃಷಿ ಯಂತ್ರದೊಳಗೆ ಸಿಲುಕಿ ತೋಳು ತುಂಡಾಗಿದ್ದ ಆತನಿಗೆ ಹೊಲದ ಮಾಲೀಕ ವೈದ್ಯಕೀಯ ನೆರವು ಕೊಡಿಸದೆ ರಸ್ತೆಯ ಮೇಲೆ ಎಸೆದು ಹೋಗಿದ್ದಾನೆ. ಇದರಿಂದಾಗಿ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಪಂಜಾಬ್ ಮೂಲದ ಸತ್ನಾಮ್ ಸಿಂಗ್ (31) ಮೃತರೆಂದು ಗುರುತಿಸಲಾಗಿದೆ. ರೋಮ್‌ನ ಲಾಜಿಯೊದಲ್ಲಿ ತರಕಾರಿ ಹೊಲದಲ್ಲಿ ಸೋಮವಾರ ಕೆಲಸ ಮಾಡುತ್ತಿದ್ದಾಗ ದೊಡ್ಡ ಯಂತ್ರದೊಳಗೆ ಅವರ ಕೈ ಸಿಲುಕಿ ತೋಳು ತುಂಡಾಗಿತ್ತು. ಸಿಂಗ್ ಸಾವಿನ ಬಗ್ಗೆ ರೋಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಖಚಿತಪಡಿಸಿದೆ.
''ಲ್ಯಾಟಿನಾದಲ್ಲಿ ಭಾರತೀಯ ಪ್ರಜೆಯೊಬ್ಬನ ದುರದೃಷ್ಟಕರ ಸಾವಿನ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಕುಟುಂಬವನ್ನು ಸಂಪರ್ಕಿಸಲು ಮತ್ತು ಕಾನ್ಸುಲರ್ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಭಾರತೀಯ ರಾಯಭಾರಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ವಿವರ: ಇಟಾಲಿ ಮಾಧ್ಯಮಗಳ ಪ್ರಕಾರ, ಭಾರತದ ಮೂಲದ ಸತ್ನಾಮ್ ಸಿಂಗ್ ಅವರು ಆಂಟೊನೆಲ್ಲೊ ಲೊವಾಟೊ ಎಂಬವರ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಹೊಲದಲ್ಲಿ ಗಾಯಗೊಂಡಿದ್ದ ಸಿಂಗ್ ಮತ್ತು ಆತನ ಪತ್ನಿಯನ್ನು ಮಾಲೀಕ ಆಂಟೊನೆಲ್ಲೊ ವ್ಯಾನ್‌ನಲ್ಲಿ ಕರೆತಂದು ಮನೆಯ ಸಮೀಪ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿದ್ದರು. ತುಂಡಾದ ಕೈಯನ್ನು ಹಣ್ಣಿನ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಈ ವೇಳೆ, ಸಿಂಗ್ ಪತ್ನಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಕೆಯ ಕಿರುಚಾಟ ಕೇಳಿ ಮನೆಯ ಮಾಲೀಕ ಇಲಾರಿಯೊ ಪೆಪೆ ಹೊರಗಡೆ ಬಂದಿದ್ದರು.
ಇದಾದ ಬಳಿಕ ಒಂದೂವರೆ ಗಂಟೆಯವರೆಗೂ ಯಾವುದೇ ವೈದ್ಯಕೀಯ ಚಿಕಿತ್ಸೆ ಸಿಂಗ್ ಅವರಿಗೆ ಕೊಡಿಸಲು ಸಾಧ್ಯವಾಗಿರಲಿಲ್ಲ. ನಂತರ ರೋಮ್‌ನ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸಲಾಗಿತ್ತು. ಆದರೆ, ಬುಧವಾರ ಸಿಂಗ್ ನಿಧನರಾಗಿದ್ದಾರೆ.
ಈ ಘಟನೆ ಬಗ್ಗೆ ಹೊಲದ ಮಾಲೀಕ ಆಂಟೊನೆಲ್ಲೊ ತಂದೆ ರೆಂಜೊ ಲೊವಾಟೊ ಪ್ರತಿಕ್ರಿಯಿಸಿ, ''ಯಂತ್ರಗಳ ಬಳಿ ಹೋಗಬೇಡ ಎಂದು ಸಿಂಗ್ಗೆ ನನ್ನ ಮಗ ಹೇಳಿದ್ದ. ಆದರೆ, ಆತ ಕೇಳಲಿಲ್ಲ. ಇದೊಂದು ದುರದೃಷ್ಟ ಘಟನೆ'' ಎಂದು ಹೇಳಿದ್ದಾರೆ.
ಕಠಿಣ ಶಿಕ್ಷೆ-ಮೆಲೋನಿ: ಈ ಕುರಿತು ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಕ್ರಿಯಿಸಿ, ''ಇದು ಅಮಾನವೀಯ ಮತ್ತು ಅನಾಗರಿಕ ಕೃತ್ಯ. ಇದಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗುತ್ತದೆ'' ಎಂದು ತಿಳಿಸಿದ್ದಾರೆ.
ಕಾರ್ಮಿಕ ಸಚಿವೆ ಮರೀನಾ ಕಾಲ್ಡೆರೋನ್ ಸಹ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಪ್ರತಿಪಕ್ಷ 5-ಸ್ಟಾರ್ ಮೂವ್‌ಮೆಂಟ್ (M5S) ನಾಯಕ ಗೈಸೆಪ್ಪೆ ಕಾಂಟೆ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.
''ನೀವು ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವಾಗ ನಿಮ್ಮ ಕೈಯನ್ನು ಕಳೆದುಕೊಳ್ಳುತ್ತೀರಿ. ನಿಮಗೆ ತಕ್ಷಣ ಚಿಕಿತ್ಸೆ ನೀಡಲಾಗುವುದಿಲ್ಲ. ಅವರು ನಿಮ್ಮನ್ನು ವ್ಯಾನ್‌ನಲ್ಲಿ ಹಾಕುತ್ತಾರೆ ಮತ್ತು ನಿಮ್ಮನ್ನು ನಿಮ್ಮ ಮನೆಯ ಹೊರಗೆ ಕಸದಂತೆ ಎಸೆಯುತ್ತಾರೆ. ಇದು ಶತಮಾನಗಳ ಹಿಂದಿನ ಗುಲಾಮರ ಕಥೆಯಂತೆ ತೋರುತ್ತದೆ'' ಎಂದು ಕಾಂಟೆ ತಮ್ಮ 'ಎಕ್ಸ್' ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತ - ಪಾಕಿಸ್ತಾನ ನಡುವಣ ಸಮಸ್ಯೆ: ನೇರ ಚರ್ಚೆಗೆ ನಮ್ಮ ಬೆಂಬಲ ಎಂದ ಅಮೆರಿಕ