ಕಜಾನ್,ರಷ್ಯಾ : ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಗೂ ಮುನ್ನ, ರಷ್ಯಾದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಸೋಮವಾರ ಮಾತನಾಡಿದ್ದು, ಭಾರತವು ಬ್ರಿಕ್ಸ್‌ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ತನ್ನದೇ ಚೌಕಟ್ಟಿನೊಳಗೆ ಆರ್ಥಿಕ ಸಹಕಾರಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕಜಾನ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಅಜೆಂಡಾದಲ್ಲಿರುವ ಕೆಲವು ವಿಷಯಗಳೆಂದರೆ, ಆರ್ಥಿಕ ಸಹಕಾರದ ಮತ್ತಷ್ಟು ವಿಸ್ತರಣೆ, ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ಇತ್ಯರ್ಥ, ಸುಸ್ಥಿರ ಅಭಿವೃದ್ಧಿ, ವಿಶೇಷವಾಗಿ ಪ್ರಧಾನಿ ಮೋದಿಯವರ ಲೈಫ್ ಮಿಷನ್, ಹವಾಮಾನ ಬದಲಾವಣೆಯ ಸಮಸ್ಯೆ, ಡಿಜಿಟಲ್ ಸೇರ್ಪಡೆ, ಸಮಾಜದ ಅಂಚಿನಲ್ಲಿರುವ ವರ್ಗಗಳ ಆರ್ಥಿಕ ಒಳಗೊಳ್ಳುವಿಕೆ ಮತ್ತು ಭಾರತದ ಕೆಲವು ಸಾಧನೆಗಳು ಒಳಗೊಂಡಿವೆ ಎಂದು ವಿನಯ್ ಕುಮಾರ್ ತಿಳಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಕಾರ್ಯಸೂಚಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಭಾರತವು ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ಮತ್ತು ಬ್ರಿಕ್ಸ್‌ನ ಚೌಕಟ್ಟಿನೊಳಗೆ ಆರ್ಥಿಕ ಸಹಕಾರಕ್ಕೆ ಬದ್ಧವಾಗಿದೆ. ಇದು ಅತ್ಯಂತ ಮೂಲಭೂತ ತತ್ವವಾಗಿದೆ. ಅಂತಾರಾಷ್ಟ್ರೀಯ ಸಮುದಾಯ, ಗ್ಲೋಬಲ್ ಸೌತ್ ಮತ್ತು ಇತರ ದೇಶಗಳ ನಡುವೆ ಬ್ರಿಕ್ಸ್‌ನೊಂದಿಗೆ ಸಹಕರಿಸಲು ನಾವು ಬದ್ಧರಾಗಿದ್ದೇವೆ'' ಎಂದಿದ್ದಾರೆ.
ರಷ್ಯಾಕ್ಕೆ ಭೇಟಿ ನೀಡಲಿರುವ ಮೋದಿ : ಕಜಾನ್‌ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಭೇಟಿಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇಂದು ರಷ್ಯಾಕ್ಕೆ ತೆರಳಲಿದ್ದಾರೆ. ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯು ರಷ್ಯಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ : ರಷ್ಯಾದಲ್ಲಿ ಪಿಎಂ ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಭಾರತೀಯ ರಾಯಭಾರಿ, "ಪ್ರಧಾನಿ ಅವರ ಮುಖ್ಯ ಕಾರ್ಯಕ್ರಮವು ಸಹಜವಾಗಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದು. ಅದನ್ನು ಹೊರತುಪಡಿಸಿ, ಅವರು ಶೃಂಗಸಭೆಯ ನಂತರ ಕೆಲವು ದ್ವಿಪಕ್ಷೀಯ ಸಭೆಗಳನ್ನು ಸಹ ನಡೆಸುತ್ತಾರೆ. ಅವುಗಳಲ್ಲಿ ಒಂದು ಸಭೆ ಅಧ್ಯಕ್ಷ ಪುಟಿನ್ ಜೊತೆಗಿದೆ ಎಂದಿದ್ದಾರೆ.
2024ರಲ್ಲಿ ಎರಡನೇ ಬಾರಿ ಭೇಟಿ : 22ನೇ ಭಾರತ - ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜುಲೈನಲ್ಲಿ ಮಾಸ್ಕೋಗೆ ಪ್ರಯಾಣಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 2024ರಲ್ಲಿ ರಷ್ಯಾಕ್ಕೆ ಎರಡನೇ ಬಾರಿ ಇಂದು ಭೇಟಿಯಾಗಲಿದ್ದಾರೆ. ಜುಲೈನಲ್ಲಿನ ರಷ್ಯಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ಮಾಸ್ಕೋದ ಕ್ರೆಮ್ಲಿನ್‌ನಲ್ಲಿ ಪ್ರಧಾನಿ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಇದನ್ನೂ ಓದಿ : ನರೇಂದ್ರ ಮೋದಿ ಬದಲಾವಣೆಯ ಹರಿಕಾರ, ಅವರಲ್ಲಿದೆ ದಿವ್ಯಶಕ್ತಿ: ಬ್ರಿಟನ್ ಮಾಜಿ ಪ್ರಧಾನಿ ಜಾನ್ಸನ್ ಶ್ಲಾಘನೆ