ನವದೆಹಲಿ: ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರನ್ನು ದೋಹಾ ಸೋಮವಾರ ಬಿಡುಗಡೆ ಮಾಡಿದೆ. ಅವರಲ್ಲಿ ಏಳು ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.
ನೌಕಾಪಡೆಯ ಯೋಧರು ತಮ್ಮ ದೇಶಕ್ಕೆ ಸುರಕ್ಷಿತವಾಗಿ ಕರೆ ತರುವಂತೆ ಯೋಧರ ಕುಟುಂಬದ ಸದಸ್ಯರು ಮನವಿ ಮಾಡಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಎಲ್ಲಾ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಅವರನ್ನು ಮರಳಿ ಕರೆತರಲು ಕಾನೂನು ನೆರವಿನ ವ್ಯವಸ್ಥೆ ಮಾಡಲಾಗುತ್ತಿದೆ. ಎಂಟು ನಿವೃತ್ತ ನೌಕಾ ಅಧಿಕಾರಿಗಳಲ್ಲಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಅಧಿಕೃತ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆ: ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಮುಕ್ತಗೊಳಿಸುವ ನಿರ್ಧಾರವನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, "ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಬರಲು ಅನುವು ಮಾಡಿಕೊಡಲು ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ" ಎಂದು ತಿಳಿಸಿದೆ.
ಜಲಾಂತರ್ಗಾಮಿ ಕಾರ್ಯಕ್ರಮದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಎಂಟು ಭಾರತೀಯ ಪ್ರಜೆಗಳು ಅಕ್ಟೋಬರ್ 2022 ರಿಂದ ಕತಾರ್ ಜೈಲಿನಲ್ಲಿದ್ದರು. ನೌಕಾಪಡೆಯ ನಿವೃತ್ತ ಸಿಬ್ಬಂದಿಗೆ ಕತಾರ್ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಅದನ್ನು ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿರಲಿಲ್ಲ. ಇದಕ್ಕೂ ಮೊದಲು, ಕತಾರ್ ನ್ಯಾಯಾಲಯವು ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ಎಂಟು ಮಾಜಿ ಭಾರತೀಯ ನೌಕಾ ಅಧಿಕಾರಿಗಳ ಮರಣದಂಡನೆ ಶಿಕ್ಷೆಯನ್ನು ಕಡಿಮೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ''ಈಗ ಮರಣದಂಡನೆ ಶಿಕ್ಷೆಯನ್ನು ಜೈಲು ಶಿಕ್ಷೆಗೆ ಇಳಿಸಲಾಗಿದೆ. ತೀರ್ಪನ್ನು ವಿವರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, "ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕತಾರ್‌ನ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ನಾವು ಇಂದು ಗಮನಿಸಿದ್ದೇವೆ. ಇದರಲ್ಲಿ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಕತಾರ್‌ನಲ್ಲಿರುವ ಕಾನೂನು ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದೆ'' ಎಂದು ಹೇಳಿದೆ.
"ವಿವರವಾದ ತೀರ್ಪಿಗೆ ಕಾಯಲಾಗುತ್ತಿದೆ. ಮುಂದಿನ ಕ್ರಮಗಳನ್ನು ನಿರ್ಧರಿಸಲು ನಾವು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಕತಾರ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಇತರ ಅಧಿಕಾರಿಗಳು ಉನ್ನತ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನಾವು ಕಾನೂನು ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಗೆ ಕ್ಷಮಾದಾನ ವಿವಾದ: ಹಂಗೇರಿ ಅಧ್ಯಕ್ಷೆ ರಾಜೀನಾಮೆ