ವಾಷಿಂಗ್ಟನ್(ಅಮೆರಿಕ): ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಕಮಲಾ ಹ್ಯಾರಿಸ್ ಧನ್ಯವಾದ ಅರ್ಪಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ 'ಪ್ರಾಜೆಕ್ಟ್ 2025' ಅಜೆಂಡಾವನ್ನು ಸೋಲಿಸಲು ದೇಶವನ್ನು ಒಗ್ಗೂಡಿಸುವುದು ನಮ್ಮ ಮುಂದಿರುವ ಗುರಿ ಎಂದು ಕಮಲಾ ಹ್ಯಾರಿಸ್ ಘೋಷಿಸಿದರು.
ಜೋ ಬೈಡನ್ ಉಮೇದುವಾರಿಕೆಗೆ ಸ್ವಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಟ್ರಂಪ್ ಜೊತೆಗಿನ ಚರ್ಚೆಯಲ್ಲಿ ವಿಫಲವಾಗಿದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಬೈಡನ್ ಭಾನುವಾರ ಘೋಷಿಸಿದರು. ಇದೇ ವೇಳೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಧನ್ಯವಾದ ಅರ್ಪಿಸಿ, ಅವರ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಭಾರತ ಮೂಲದ ಮೊದಲ ಕಪ್ಪು ಮತ್ತು ಅಮೆರಿಕದ ಮೊದಲ ಉಪಾಧ್ಯಕ್ಷೆ.
"ಅಧ್ಯಕ್ಷರ ಅನುಮೋದನೆಯನ್ನು ಗೌರವದಿಂದ ಸ್ವೀಕರಿಸುತ್ತೇನೆ. ಈ ನಾಮನಿರ್ದೇಶನವನ್ನು ಗೆಲ್ಲುವುದು ನನ್ನ ಉದ್ದೇಶ" ಎಂದು ಹ್ಯಾರಿಸ್ ಹೇಳಿದರು.
ಅಧ್ಯಕ್ಷೀಯ ನಾಮನಿರ್ದೇಶನದ ರೇಸ್‌ನಲ್ಲಿ ಡೆಮಾಕ್ರಾಟ್‌ಗಳ ನಡುವೆ ಅನೇಕ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಬೈಡನ್ ಅವರ ಬೆಂಬಲ ಕಮಲಾ ಹ್ಯಾರಿಸ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಆದರೂ, ಮುಂದಿನ ತಿಂಗಳು ಚಿಕಾಗೋದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷದ ಪ್ರತಿನಿಧಿಗಳು ಇದನ್ನು ಅನುಮೋದಿಸಬೇಕಿದೆ.
"ಅಮೆರಿಕದ ಜನರ ಪರವಾಗಿ, ದೇಶದ ಅಧ್ಯಕ್ಷರಾಗಿ ಅವರ ಅತ್ಯುತ್ತಮ ಸೇವೆಗಾಗಿ ನಾನು ಬೈಡನ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ. ಈ ದೇಶಕ್ಕೆ ಅವರ ದಶಕಗಳ ಸೇವೆಗಾಗಿ ಧನ್ಯವಾದಗಳು. ಪ್ರಾಮಾಣಿಕತೆ, ದೇಶಭಕ್ತಿ, ಸೌಹಾರ್ದತೆ ಒಳಗೊಂಡ ಗುಣಗಳನ್ನು ಅವರಲ್ಲಿ ಕಂಡಿದ್ದೇನೆ. ಅವರು ಯಾವಾಗಲೂ ದೇಶದ ಹಿತಾಸಕ್ತಿಗೆ ಆದ್ಯತೆ ನೀಡಿದವರು. ಒಂದು ವರ್ಷ ದೇಶಾದ್ಯಂತ ಪ್ರವಾಸ ಮಾಡಿದರು. ಚುನಾವಣೆಯಲ್ಲಿ ಯಾರ ಪರ ನಿಲ್ಲಬೇಕು ಎಂಬುದನ್ನು ಜನತೆಗೆ ವಿವರಿಸಿದ್ದರು. ಮುಂದಿನ ಕೆಲವು ವಾರಗಳವರೆಗೆ ಅದೇ ರೀತಿ ಮಾಡುತ್ತಾರೆ. ಟ್ರಂಪ್ ಮತ್ತು ಅವರ ಪ್ರಾಜೆಕ್ಟ್ 2025 ಅನ್ನು ಸೋಲಿಸಲು ಎಲ್ಲಾ ಶಕ್ತಿಗಳು ಒಂದಾಗಬೇಕು. ಚುನಾವಣೆಗೆ ಇನ್ನೂ 107 ದಿನಗಳಿವೆ. ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಖಂಡಿತವಾಗಿಯೂ ಗೆಲ್ಲುತ್ತೇವೆ" ಎಂದು ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ಪತ್ನಿ ಹಿಲರಿ ಕ್ಲಿಂಟನ್ ಈಗಾಗಲೇ ಹ್ಯಾರಿಸ್‌ಗೆ ಬೆಂಬಲ ಘೋಷಿಸಿದ್ದಾರೆ. ಇನ್ನು ಆಗಸ್ಟ್ 19ರಂದು ನಡೆಯುವ ಸಮಾವೇಶದಲ್ಲಿ ಪಕ್ಷದ ಪ್ರತಿನಿಧಿಗಳ ಒಪ್ಪಿಗೆ ಪಡೆಯುವುದು ಕಮಲಾಗೆ ಸುಲಭವಾಗಲಿದೆ ಎಂಬ ವರದಿಗಳಿವೆ. ಪ್ರಮುಖ ಭಾರತೀಯ ಮೂಲದ ಡೆಮಾಕ್ರಟಿಕ್ ನಾಯಕಿ ಪ್ರಮೀಳಾ ಜಯಪಾಲ್ ಮತ್ತು ಅಶ್ವಿನಿ ರಾಮಸ್ವಾಮಿ ಕೂಡ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬೈಡನ್: ಕಮಲಾ ಹ್ಯಾರಿಸ್‌ಗೆ ಬೆಂಬಲ - Joe Biden