ಟೆಲ್ ಅವೀವ್: 40 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಇಸ್ರೇಲ್ನ ಬೇಡಿಕೆಯನ್ನು ಹಮಾಸ್ ತಿರಸ್ಕರಿಸಿದ ನಂತರ ಕೈರೋದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಪರೋಕ್ಷ ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ ಉಂಟಾಗಿದೆ. ತನ್ನ ಬಳಿ 40 ಜನ ವೃದ್ಧ ಮತ್ತು ಮಹಿಳಾ ಒತ್ತೆಯಾಳುಗಳು ಇಲ್ಲ ಎಂದು ಹಮಾಸ್ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಆದರೆ, ಶಾಂತಿ ಮಾತುಕತೆಗಳು ಮುಂದುವರಿಯಬೇಕಾದರೆ ಹಮಾಸ್ ಕನಿಷ್ಠ 40 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲೇಬೇಕು ಎಂದು ಇಸ್ರೇಲ್ ಪಟ್ಟು ಹಿಡಿದಿದೆ.
ವೃದ್ಧ ಮತ್ತು ಮಹಿಳಾ ಒತ್ತೆಯಾಳುಗಳನ್ನು ಮಾತ್ರ ಸೇರಿಸಿ 40ರ ಸಂಖ್ಯೆ ತಲುಪುವುದು ಕಷ್ಟ. ಹೀಗಾಗಿ ಇದಕ್ಕೆ ಆರೋಗ್ಯವಂತ ಪುರುಷ ಒತ್ತೆಯಾಳುಗಳನ್ನು ಕೂಡ ಸೇರಿಸಬೇಕಾಗುತ್ತದೆ ಎಂದು ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ತಂಡವು ಕತಾರ್ ಮತ್ತು ಈಜಿಪ್ಟ್ ನಾಯಕರನ್ನೊಳಗೊಂಡ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ.
ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಹಮಾಸ್ ನಾಯಕತ್ವದಲ್ಲಿ ಭಿನ್ನಮತ ಉಂಟಾಗಿದೆ. ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಹಮಾಸ್ನ ರಾಜಕೀಯ ಬ್ಯೂರೋ ತಕ್ಷಣದ ಕದನ ವಿರಾಮ ಬಯಸುತ್ತಿದ್ದರೆ, ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ನೇತೃತ್ವದ ಮಿಲಿಟರಿ ಬಣವು ಕಠಿಣ ಚೌಕಾಸಿ ನಡೆಸಿ ಗಾಜಾ ಪಟ್ಟಿಯಿಂದ ಇಸ್ರೇಲಿ ಸೈನ್ಯವು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಮಾಡಬೇಕೆಂದು ಬಯಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಹಮಾಸ್ ನಾಯಕತ್ವದಲ್ಲಿನ ಈ ವ್ಯತಿರಿಕ್ತ ನಿಲುವು ಮಧ್ಯಸ್ಥಿಕೆ ಮಾತುಕತೆಗಳು ಪದೇ ಪದೆ ವಿಫಲವಾಗಲು ಕಾರಣವಾಗಿದೆ ಎಂದು ಇಸ್ರೇಲ್ ಯುದ್ಧ ಕ್ಯಾಬಿನೆಟ್ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಕದನ ವಿರಾಮಕ್ಕೆ ಒತ್ತಾಯ: ಕಳೆದ ಆರು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧದಿಂದ ಜರ್ಜರಿತವಾಗಿರುವ ಗಾಜಾ ಪಟ್ಟಿಯಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಈಜಿಪ್ಟ್, ಜೋರ್ಡಾನ್ ಮತ್ತು ಫ್ರಾನ್ಸ್ ಒತ್ತಾಯಿಸಿವೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾಹ್ ಅಲ್-ಸಿಸಿ, ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸೋಮವಾರ ನೀಡಿದ ಜಂಟಿ ಹೇಳಿಕೆಯಲ್ಲಿ, ಯುಎನ್ ಭದ್ರತಾ ಮಂಡಳಿಯ ನಿರ್ಣಯ 2728 ಅನ್ನು ತಕ್ಷಣ ಮತ್ತು ಬೇಷರತ್ತಾಗಿ ಜಾರಿಗೆ ತರಬೇಕು ಎಂದು ಕರೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"1.5 ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೈನ್ ನಾಗರಿಕರು ಆಶ್ರಯ ಪಡೆದಿರುವ ರಫಾ ಮೇಲೆ ಇಸ್ರೇಲ್ ದಾಳಿ ಅಪಾಯಕಾರಿ ಪರಿಣಾಮಗಳ ಬಗ್ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಇಸ್ರೇಲ್ ರಫಾ ಮೇಲೆ ಆಕ್ರಮಣ ಮಾಡಿದ್ದೇ ಆದಲ್ಲಿ ಅತ್ಯಧಿಕ ಸಾವು-ನೋವುಗಳು ಉಂಟಾಗಲಿವೆ. ಇದು ಗಾಜಾ ಜನತೆಯ ಸಾಮೂಹಿಕ ಬಲವಂತದ ಸ್ಥಳಾಂತರದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಗೆ ಕಾರಣವಾಗುತ್ತದೆ" ಎಂದು ಈ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಇರಾನ್ನಿಂದ ದಾಳಿ ಸಾಧ್ಯತೆ: ವೈಮಾನಿಕ ಸುರಕ್ಷತೆ ಹೆಚ್ಚಿಸಿದ ಇಸ್ರೇಲ್ - ISRAEL