R Ashwin Net Worth: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಆಗಿರುವ ಆರ್ ಅಶ್ವಿನ್ ಅವರು ನಿನ್ನೆ (ಡಿ. 18) ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡುವೆಯೇ 38 ವರ್ಷದ ಅಶ್ವಿನ್ ದಿಢೀರ್ ನಿವೃತ್ತಿಯ ನಿರ್ಧಾರ ಪ್ರಕಟಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. 14 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಮಿಂಚಿದ ಅಶ್ವಿನ್ ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯಲಿದ್ದು, ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಏತನ್ಮಧ್ಯೆ, ಅಶ್ವಿನ್ ನಿವೃತ್ತಿ ಬೆನ್ನಲ್ಲೇ ಅವರ ಆಸ್ತಿಯ ವಿಚಾರವೂ ಮುನ್ನೆಲೆಗೆ ಬಂದಿದೆ. ಭಾರತದ ಸ್ಟಾರ್ ಸ್ಪಿನ್ನರ್ ಎನಿಸಿಕೊಂಡಿರುವ ಅಶ್ವಿನ್ ಆಸ್ತಿ ಗಳಿಕೆಯಲ್ಲೂ ಮುಂದಿದ್ದಾರೆ. ಇವರು ಕೂಡ ಕೋಟ್ಯಾಧಿಪತಿ ಆಗಿದ್ದಾರೆ. ಅಶ್ವಿನ್ ಜಾಹೀರಾತು, ವ್ಯಾಪಾರ, ಕ್ರಿಕೆಟ್ ಮತ್ತು ಯೂಟ್ಯೂಬ್ ಚಾನಲ್ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಆರ್. ಅಶ್ವಿನ್ ಅವರ ಒಟ್ಟು ಆಸ್ತಿ ಎಷ್ಟು, ಅವರ ಬಳಿಯಿರುವ ಐಷಾರಾಮಿ ಕಾರು, ಮನೆಯ ವಿವರ ಬಗ್ಗೆ ಇದೀಗ ತಿಳಿದುಕೊಳ್ಳೋಣ.
ಚೆನ್ನೈನಲ್ಲಿದೆ ಐಷಾರಾಮಿ ಮನೆ: ಆರ್. ಅಶ್ವಿನ್ ಅವರು ತಮಿಳುನಾಡು ಮೂಲದವರಾಗಿದ್ದು, ಚೆನ್ನೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕುಟುಂಬದೊಂದಿಗೆ ಈ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅವರ ಒಡೆತನದಲ್ಲಿರುವ ಈ ಮನೆ 9 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮನೆಯೂ ಅತ್ಯಾಧುನಿಕ ಇಂಟಿಯರ್ ಒಳಗೊಂಡಿದೆ ಎಂದು ವರದಿಯಾಗಿದೆ. ಇದಷ್ಟೇ ಅಲ್ಲದೇ ರಿಯಲ್ ಎಷ್ಟೇಟ್ಗಳಲ್ಲೂ ಹೂಡಿಕೆ ಮಾಡಿದ್ದಾರೆ. ವರದಿ ಪ್ರಕಾರ ಅಶ್ವಿನ್ ಅವರ 26 ಕೋಟಿ ಮೌಲ್ಯದಷ್ಟು ಪ್ರಾಪರ್ಟಿಗಳನ್ನು ಹೊಂದಿದ್ದಾರೆ.
ಕಾರುಗಳು: ಆರ್. ಅಶ್ವಿನ್ ಅವರ ಬಳಿ ಟಾಪ್ ಮಾಡಲ್ ಕಾರುಗಳು ಇವೆ. ಅವರ ಗ್ಯಾರೆಜ್ನಲ್ಲಿ ಕೆಲವು ಅತ್ಯಾಧುನಿಕ ಕಾರುಗಳು ಇವೆ. ಇವುಗಳಲ್ಲಿ 6 ಕೋಟಿ ರೂ. ಬೆಲೆಯ ರೋಲ್ಸ್ರಾಯ್ಸ್ ಜತೆಗೆ 88 ಲಕ್ಷದ ಆಡಿ ಕ್ಯೂ7 ಮತ್ತು 93 ಲಕ್ಷದ ಬೆಂಜ್ ಕಾರನ್ನು ಹೊಂದಿದ್ದಾರೆ.
ಎಂಡಾರ್ಸ್ಮೆಂಟ್: ಅಶ್ವಿನ್ ಅವರು ಹಲವಾರು ಖಾಸಗಿ ಬ್ರ್ಯಾಂಡ್ ಜಾಹೀರಾತುಗಳ ಪ್ರಚಾರ ಮಾಡುತ್ತಾರೆ. ಇದರಲ್ಲಿ Oppo Mobiles, Aristocrat Bags, Myntra, Dream11, Bombay Shaving Company, Specsmakers, Zoomcar, Manna Foods, ಮತ್ತು Coco Studio Tamil ನಂತಹ ಪ್ರಮುಖ ಬ್ರಾಂಡ್‌ಗಳನ್ನು ಜಾಹೀರಾತು ಮೂಲಕ ಪ್ರಚುರಪಡಿಸುತ್ತಾರೆ. ಜೊತೆಗೆ ಅವರು ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ. ಅವರ ಚಾನಲ್ 16 ಲಕ್ಷ ಚಂದಾದಾರರನ್ನು ಹೊಂದಿದೆ. ಇದರ ಮೂಲಕವೂ ಅಶ್ವಿನ್ ಹಣ ಸಂಪಾದನೆ ಮಾಡುತ್ತಾರೆ. ಇದಷ್ಟೇ ಅಲ್ಲದೇ ಬಿಸಿಸಿಐನೊಂದಿಗಿನ ಒಪ್ಪಂದ ಮತ್ತು ಐಪಿಎಲ್ ಮೂಲಕವೂ ಇವರಿಗೆ ಹಣ ಹರದಿಬರುತ್ತದೆ.
ತಿಂಗಳ ಆದಾಯ ಎಷ್ಟು? ವರದಿಗಳ ಪ್ರಕಾರ ಆರ್ ಅಶ್ವಿನ್ ಅವರ ವಾರ್ಷಿಕ ಆದಾಯ 10 ಕೋಟಿಗೂ ಅಧಿಕವಾಗಿದ್ದು, ತಿಂಗಳಿಗೆ 50 ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದನೆ ಮಾಡುತ್ತಾರೆ ಎಂದು ವರದಿಯಾಗಿದೆ.
ಅಶ್ವಿನ್ ಅವರ ಒಟ್ಟು ಆಸ್ತಿ: ಸ್ಪೋರ್ಟ್ಸ್ಕೀಡಾ ವರದಿ ಪ್ರಕಾರ, 2024ರ ವೇಳೆಗೆ ಆರ್ ಅಶ್ವಿನ್ 16 ಮಿಲಿಯನ್ ಡಾಲರ್ ಆಸ್ತಿಗೆ ಒಡೆಯನಾಗಿದ್ದಾರೆ. ಇದು ಭಾರತದ ರೂಪಾಯಿಯಲ್ಲಿ ನೋಡುವುದಾದರೆ, ಬರೋಬ್ಬರಿ 132 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆರ್. ಅಶ್ವಿನ್ ನಿವೃತ್ತಿ ಘೋಷಣೆ: 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ