ಪೋರ್ಟ್-ಔ-ಪ್ರಿನ್ಸ್(ಹೈಟಿ): ಹೈಟಿ ಸಶಸ್ತ್ರ ಗ್ಯಾಂಗ್‌ಗಳು ಬುಧವಾರ ಪೋರ್ಟ್-ಔ-ಪ್ರಿನ್ಸ್‌ನ ಉಪನಗರಗಳಲ್ಲಿ ಮತ್ತೆ ದಾಳಿಗಳನ್ನು ಶುರು ಮಾಡಿವೆ. ಹೈಟಿಯ ರಾಜಧಾನಿ ಬಳಿ ಜನವಸತಿ ಪ್ರದೇಶಗಳಲ್ಲಿ ಭಾರೀ ಗುಂಡಿನ ಸದ್ದು ಕೇಳಿಸಿದೆ. ಇಲ್ಲಿನ ಉಪನಗರಗಳಲ್ಲಿ ಐದಕ್ಕೂ ಹೆಚ್ಚು ಮೃತದೇಹಗಳು ಸಿಕ್ಕಿವೆ. ಪೀಶನ್-ವಿಲ್ಲೆ, ಮೆಯೊಟ್ಟೆ, ಡೈಗ್ ಮತ್ತು ಮೆಟಿವಿಯರ್ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಸಶಸ್ತ್ರ ಗ್ಯಾಂಗ್‌ಗಳು ಕೆಲವು ಪ್ರದೇಶಗಳಿಗೆ ಜನರ ಪ್ರವೇಶವನ್ನೂ ನಿರ್ಬಂಧಿಸಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಬುಧವಾರ ಪೋರ್ಟ್-ಔ-ಪ್ರಿನ್ಸ್‌ನಿಂದ ಅಮೆರಿಕನ್ ನಾಗರಿಕರ ತನ್ನ ಮೊದಲ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿತು. ಡೊಮಿನಿಕನ್ ರಿಪಬ್ಲಿಕ್‌ನ ರಾಜಧಾನಿಯಾದ ನೆರೆಯ ಸ್ಯಾಂಟೋ ಡೊಮಿಂಗೊಕ್ಕೆ 15ಕ್ಕೂ ಹೆಚ್ಚು ಅಮೆರಿಕನ್ನರನ್ನು ಏರ್‌ಲಿಫ್ಟ್ ಮಾಡಲಾಗಿದೆ.
ಹೆಲಿಕಾಪ್ಟರ್, ವಿಮಾನಗಳಲ್ಲಿ 30ಕ್ಕೂ ಹೆಚ್ಚು ಅಮೆರಿಕ ನಾಗರಿಕರನ್ನು ಪ್ರತೀ ದಿನ ಪೋರ್ಟ್-ಔ-ಪ್ರಿನ್ಸ್‌ನಿಂದ ಕರೆ ತರಲು ಸಾಧ್ಯವಾಗುತ್ತಿದೆ. ಹೈಟಿಯಿಂದ ನಿರ್ಗಮಿಸಲು ಬಯಸಿದ ಅಮೆರಿಕ ನಾಗರಿಕರ ಬೇಡಿಕೆಯನ್ನು ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಭಾನುವಾರ 30ಕ್ಕೂ ಹೆಚ್ಚು ಅಮೆರಿಕ ನಾಗರಿಕರನ್ನು ಉತ್ತರ ಹೈಟಿಯ ಕರಾವಳಿ ನಗರವಾದ ಕ್ಯಾಪ್-ಹೈಟಿಯನ್‌ನಿಂದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
4,000ಕ್ಕೂ ಹೆಚ್ಚು ಕೈದಿಗಳ ಬಿಡುಗಡೆ: ಪೋರ್ಟ್-ಔ-ಪ್ರಿನ್ಸ್‌ನ ಭಾಗಗಳು ಹಾಗೂ ಪೆಶನ್-ವಿಲ್ಲೆಯಲ್ಲಿನ ಲ್ಯಾಬೌಲ್ ಮತ್ತು ಥಾಮಸಿನ್‌ನಲ್ಲಿ ಕಳೆದ ಎರಡು ದಿನಗಳಿಂದ ಸಶಸ್ತ್ರ ಗ್ಯಾಂಗ್‌ಗಳಿಂದ ನಡೆದ ದಾಳಿಗಳು ಅತಿರೇಕಕ್ಕೆ ತಿರುಗಿವೆ. ಈ ಹಿಂಸಾಚಾರದಿಂದ ಪೆಷನ್-ವಿಲ್ಲೆಯಾದ್ಯಂತ ಬ್ಯಾಂಕುಗಳು, ಶಾಲೆಗಳು ಮತ್ತು ವ್ಯವಹಾರಗಳನ್ನು ಬಂದ್ ಮಾಡಲಾಗಿತ್ತು. ಬಂದೂಕುಧಾರಿಗಳು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹೈಟಿಯ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ದೇಶದ ಎರಡು ದೊಡ್ಡ ಕಾರಾಗೃಹಗಳಿಗೆ ನುಗ್ಗಿ 4,000 ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ಹಿಂಸಾಚಾರದಿಂದ ನೂರಾರು ಜನರು ಮೃತಪಟ್ಟಿದ್ದಾರೆ. ಸುಮಾರು 17,000 ನಿವಾಸಿಗಳು ನಿರಾಶ್ರಿತರಾಗಿದ್ದಾರೆ.
ಆಪರೇಷನ್ ಇಂದ್ರಾವತಿ ಆರಂಭ- ಜೈಶಂಕರ್: ಹೈಟಿಯಿಂದ ಡೊಮಿನಿಕನ್ ಗಣರಾಜ್ಯಕ್ಕೆ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತವು ಆಪರೇಷನ್ ಇಂದ್ರಾವತಿಯನ್ನು ಪ್ರಾರಂಭಿಸಿದೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಗಮನಹರಿಸಲು ನಾವು ಸಂಪೂರ್ಣವಾಗಿ ಬದ್ಧವಾಗಿದ್ದೇವೆ'' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಹೇಳಿದ್ದಾರೆ.
12 ಭಾರತೀಯ ಪ್ರಜೆಗಳು ಸ್ಥಳಾಂತರ: ಕೆರಿಬಿಯನ್ ರಾಷ್ಟ್ರದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೈಟಿಯಿಂದ ತನ್ನ 90 ಪ್ರಜೆಗಳನ್ನು ಸ್ಥಳಾಂತರಿಸಲು ಗಮನಹರಿಸಲಾಗುತ್ತಿದೆ ಎಂದು ಭಾರತ ಇತ್ತೀಚೆಗೆ ಹೇಳಿತ್ತು. ಇದರ ಕ್ರಮವಾಗಿ ಪ್ರತಿಕ್ರಿಯಿಸಿದ ಎಸ್. ಜೈಶಂಕರ್, "ಭಾರತವು ತನ್ನ ಪ್ರಜೆಗಳನ್ನು ಹೈಟಿಯಿಂದ ಡೊಮಿನಿಕನ್ ರಿಪಬ್ಲಿಕ್‌ಗೆ ಸ್ಥಳಾಂತರಿಸಲು ಆಪರೇಷನ್ ಇಂದ್ರಾವತಿಯನ್ನು ಪ್ರಾರಂಭಿಸಿದೆ. ಇಂದು 12 ಭಾರತೀಯರನ್ನು ಸ್ಥಳಾಂತರಿಸಲಾಗಿದೆ. ಬೆಂಬಲ ನೀಡಿದ ಡೊಮಿನಿಕನ್ ರಿಪಬ್ಲಿಕ್ ಸರ್ಕಾರಕ್ಕೆ ಧನ್ಯವಾದಗಳು" ಎಂದು ಜೈಶಂಕರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿ ಪ್ರತೀ ನಿತ್ಯ 37 ತಾಯಂದಿರ ಸಾವು - Gaza