ಕ್ವಿಟೊ (ಈಕ್ವೆಡಾರ್): ಶಸ್ತ್ರಸಜ್ಜಿತ ಬಂದೂಕುಧಾರಿಗಳ ಗುಂಪೊಂದು ಈಕ್ವೆಡಾರ್‌ನ ಕರಾವಳಿ ನಗರವಾದ ಗುವಾಕ್ವಿಲ್‌ನಲ್ಲಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಎಂಟು ಜನರನ್ನು ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಇನ್ನೂ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ದಕ್ಷಿಣ ಅಮೆರಿಕದಲ್ಲಿ ಈ ವಾರದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯ ಕಾಲಮಾನ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಅಲ್ಲಿ ನೆರೆದಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ ಆರು ಜನ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ 6 ಜನ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಮಾಧ್ಯಮಗಳಿಗೆ ತಿಳಿಸಿದೆ.
ಇದಕ್ಕೂ ಮುನ್ನ ಶುಕ್ರವಾರದಂದು ಮನಾಬಿ ಕರಾವಳಿ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ಗುಂಪೊಂದು 5 ಜನರನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಘಟನೆಯಲ್ಲಿ ಮೃತ ಪಟ್ಟ ಐವರು ಮಾದಕವಸ್ತು ಕಳ್ಳಸಾಗಣೆ ವಿವಾದದಲ್ಲಿ ಗುರತಿಸಿಕೊಂಡಿದ್ದ ಪ್ರವಾಸಿಗರು ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದರು. ಐವರು ಅಪ್ರಾಪ್ತರು ಸೇರಿ ಒಟ್ಟು 11 ಜನರನ್ನು ಅಪಹರಿಸಲಾಗಿತ್ತು. ಈ ಪೈಕಿ 6 ಜನರನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಯಾವ ದೇಶದ ಪ್ರಜೆಗಳು ಮತ್ತು ಅವರ ಹೆಸರನ್ನು ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದರು.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಮನಾಬಿಯಲ್ಲಿ ಹತ್ಯಾ ಸರಣಿ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾರ್ಕೋಟೆರರಿಸಂ ಮತ್ತು ಅದರ ಮಿತ್ರ ಸಂಘಟನೆಗಳು ನಮ್ಮನ್ನು ಹೆದರಿಸಲೆಂದು ಇಂತಹ ಕೃತ್ಯಗಳನ್ನು ಎಸಗುತ್ತಿವೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದ ನೊಬೋವಾ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಎಳೆದೊಯ್ಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಈಕ್ವೆಡಾರ್ ಶಾಂತಿಯುತವಾದ ತಾಣ ಎಂದು ಗುರುತಿಸಿಕೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಿಂಸಾತ್ಮಕ ದಾಳಿಗಳು ಉಲ್ಬಣಗೊಂಡಿವೆ.
ಮಾ. 24ರಂದು, ಮನಾಬಿ ಪ್ರಾಂತ್ಯದ ಸಣ್ಣ ಪಟ್ಟಣವೊಂದರ 27 ವರ್ಷದ ಮೇಯರ್ನನ್ನು ಹತ್ಯೆ ಮಾಡಲಾಗಿತ್ತು. ತನ್ನ ಸಹೊದ್ಯೋಗಿಯೆ ಕೃತ್ಯ ಎಸಗಿದ್ದ. ಬ್ರಿಗಿಟ್ಟೆ ಗಾರ್ಸಿಯಾ ಮತ್ತು ಜೈರೊ ಲೂರ್ ಗುಂಡೇಟಿನ ಗಾಯಗಳೊಂದಿಗೆ ವಾಹನದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಇದನ್ನೂ ಓದಿ: ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್ನ ಅತಿದೊಡ್ಡ ಉಷ್ಣ ವಿದ್ಯುತ್ ಸ್ಥಾವರ ಧ್ವಂಸ - Russia Ukraine War