ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ತೀವ್ರವಾಗಿ ಹೆಚ್ಚಿಸಲಾಗಿದೆ. ಬಕ್ರೀದ್ ಹಬ್ಬದ ಮುಂಚಿತವಾಗಿ ಇಂಧನ ದರಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು. ಆದರೆ, ಪಾಕಿಸ್ತಾನದಲ್ಲಿ ಸೋಮವಾರ ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆಯೇ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಹೆಚ್ಚಿಸಲಾಗಿದೆ. ಹೊಸ ದರಗಳು ಮುಂದಿನ 15 ದಿನಗಳವರೆಗೆ ಜಾರಿಯಲ್ಲಿರುತ್ತವೆ.
ಅಧಿಸೂಚನೆ ಪ್ರಕಾರ, 2024-25ರ ಬಜೆಟ್ನ ಮೊದಲ ದಿನದಂದು ಪೆಟ್ರೋಲ್ ಮತ್ತು ಹೈಸ್ಪೀಡ್ ಡೀಸೆಲ್ (ಎಚ್ಎಸ್ಡಿ) ಬೆಲೆಗಳನ್ನು ಕ್ರಮವಾಗಿ ಲೀಟರ್ಗೆ 7.45 ಮತ್ತು 9.56 ರೂ.ಗೆ ಹೆಚ್ಚಿಸಲಾಗಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಕಳೆದ ತಿಂಗಳು, ಈದ್ ಉಲ್ ಅಧಾಗೆ ಮುಂಚಿತವಾಗಿ ಸರ್ಕಾರವು ಪೆಟ್ರೋಲ್ ಮತ್ತು ಎಚ್ಎಸ್ಡಿ ಬೆಲೆಯನ್ನು ಕ್ರಮವಾಗಿ ಲೀಟರ್ಗೆ 10.20 ರೂ. ಮತ್ತು 2.33 ಪಾಕಿಸ್ತಾನಿ ರೂ.ಗಳಷ್ಟು ಕಡಿತಗೊಳಿಸಿತ್ತು.
ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ (ಒಗ್ರಾ) ಶಿಫಾರಸುಗಳ ಆಧಾರದ ಮೇಲೆ ಮತ್ತು ಪ್ರಧಾನಿ ಅವರ ಅನುಮೋದನೆಯೊಂದಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಜುಲೈ 1 ರಿಂದ 15 ರವರೆಗೆ ಹೊಸ ಎಕ್ಸ್-ಡಿಪೋ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 265.61 ರೂ.ಗಳಾಗಿದ್ದು, ಹಿಂದಿನ ಹದಿನೈದು ದಿನಗಳಲ್ಲಿ ಇದ್ದ 258.16 ರೂ.ಗೆ ಹೋಲಿಸಿದರೆ, ಬೆಲೆ ಶೇಕಡಾ 2.9 ರಷ್ಟು ಹೆಚ್ಚಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ 266 ರೂ.ಗಳಾಗಬಹುದು ಎಂದು ಅದು ಹೇಳಿದೆ.
ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ಕನಿಷ್ಠ 9.56 ರೂ.ಗಳಷ್ಟು ಹೆಚ್ಚಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರವು ನಾಗರಿಕರಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿದೆ. ಜಾಗತಿಕ ಇಂಧನ ಬೆಲೆಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳ ಪರಿಷ್ಕರಣೆ ಮಾಡಲಾಗಿದೆ ಎಂದು ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ಸಮರ್ಥಿಸಿಕೊಂಡರೂ ಈ ಕ್ರಮವು ಜನಸಾಮಾನ್ಯರನ್ನು ಕೆರಳಿಸಿದೆ.
"ಈ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯನ್ನು ಮೆಚ್ಚಿಸಲು ಮತ್ತು ತೃಪ್ತಿಪಡಿಸಲು ಮಾತ್ರ ಕೆಲಸ ಮಾಡುತ್ತಿದೆ. ಈ ಸರ್ಕಾರಕ್ಕೆ ನಾಗರಿಕರ ಕಷ್ಟಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ" ಎಂದು ಇಸ್ಲಾಮಾಬಾದ್ ನಿವಾಸಿಯೊಬ್ಬರು ಹೇಳಿದರು.
ಇದನ್ನೂ ಓದಿ : ಗಾಜಾದಲ್ಲಿ ಕದನ ವಿರಾಮಕ್ಕೆ ಯತ್ನ: ಹಮಾಸ್ ಹಾಗೂ ಈಜಿಪ್ಟ್ ಗುಪ್ತಚರ ಮುಖ್ಯಸ್ಥರ ಮಾತುಕತೆ - Gaza ceasefire talks