ನವದೆಹಲಿ: ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ಅವರ ಅಗಲಿಕೆಗೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯೂಯಲ್ ಮ್ಯಾಕ್ರನ್ ಸಂತಾಪ ಸೂಚಿಸಿದ್ದಾರೆ. ಭಾರತದ ಆತ್ಮೀಯ ಸ್ನೇಹಿತನನ್ನು ಫ್ರಾನ್ಸ್ ಕಳೆದುಕೊಂಡಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಭಾರತ ಮತ್ತು ಫ್ರಾನ್ಸ್ನ ಹೊಸ ಅವಿಷ್ಕಾರ ಮತ್ತು ಉತ್ಪಾದನೆ ವೃದ್ಧಿಯಲ್ಲಿ ರತನ್ ಟಾಟಾ ಅವರ ಕೊಡಗೆ ಇದೆ. ಅವರ ಅಗಾಧ ಪರಂಪರೆ ಹೊರತಾಗಿ ಅವರು ಮಾನವೀಯ ದೃಷ್ಟಿ ಹೊಂದಿರುವ ಅದ್ಬುತ ನಾಯಕ ಎಂದು ಹೊಗಳಿದ ಅವರು, ಸಮಾಜಸೇವೆ ಮತ್ತು ಮಾನವೀಯತೆಯ ವ್ಯಕ್ತಿ ಎಂದು ಸ್ಮರಿಸಿದ್ದಾರೆ. ಅವರ ಈ ಸಾವಿಗೆ ಸಂತಾಪ ಸೂಚಿಸುತ್ತಿದ್ದು, ಸಮಾಜದ ಒಳಿತಿಗಾಗಿ ನಿಮ್ಮ ಜೀವಮಾನದುದ್ದಕ್ಕೂ ತೋರಿದ ಬದ್ಧತೆಯನ್ನು ನಾವು ಸದಾ ಗೌರವದಿಂದ ಸ್ಮರಿಸುತ್ತೇವೆ ಎಂದಿದ್ದಾರೆ.
ವಯೋ ಸಂಬಂಧಿತ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರು ಬುಧವಾರ ಮಧ್ಯರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಸಾವಿಗೆ ಉದ್ಯಮ ಮತ್ತು ಕಾರ್ಪೋರೇಟ್ ವಲಯ ಸೇರಿದಂತೆ ದೇಶದ ಮೂಲೆ ಮೂಲೆಗಳ ಜನರು ಕಂಬನಿ ಮಿಡಿದಿತ್ತು. ಉದ್ಯಮ ಲೋಕದ ಸಾಮ್ರಾಟನನ್ನು ಕಳೆದುಕೊಂಡ ದುಃಖದಲ್ಲಿತ್ತು.
ಮುಂಬೈನ ವರ್ಲಿ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಮುನ್ನ ಉದ್ಯಮಲೋಕದ ದೃವತಾರೆ ರತನ್ ನಾವೆಲ್ ಟಾಟಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶವದ ಪೆಟ್ಟಿಗೆ ಮೇಲೆ ತ್ರಿವರ್ಣ ಧ್ವಜ ಹಾಕಿ ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಕಲ ಸರ್ಕಾರಿ ಗೌರವಗಳನ್ನು ಸಮರ್ಪಣೆ ಮಾಡಲಾಯಿತು.
ವರ್ಲಿ ಸ್ಮಶಾನಕ್ಕೆ ಪಾರ್ಥಿವ ಶರೀರದ ವಾಹನ ಸಂಚಾರದ ವೇಳೆ ಮುಂಬೈನ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು, ಅಗಲಿದ ಶಾಂತಿಯ ಪ್ರತಿರೂಪಕ್ಕೆ ಗೌರವ ನಮನ ಸಲ್ಲಿಸಿದರು. ಅಂತಿಮ ವಿಧಿವಿಧಾನದ ವೇಳೆ ವರ್ಲಿಯ ಶವಗಾರದ ಪ್ರಾರ್ಥನಾ ಸಭೆಯಲ್ಲಿ 200 ವಿವಿಐಪಿ ಮತ್ತು ಕುಟುಂಬದ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಸಕಲ ಸರ್ಕಾರಿ ಗೌರವ ನೀಡಿ, ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದ ರತನ್; ಇದು ಟಾಟಾರ ಅದ್ಭುತ ಲವ್ ಸ್ಟೋರಿ!