ಡಮಾಸ್ಕಸ್(ಸಿರಿಯಾ): ಶನಿವಾರ ಬೆಳಿಗ್ಗೆ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಮೇಲೆ ಇಸ್ರೇಲ್ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿ ನಡೆದ ಸಂದರ್ಭದಲ್ಲಿ ಇರಾನ್ ರೆವಲ್ಯೂಷನರಿ ಗಾರ್ಡ್‌ನ ಗುಪ್ತಚರ ಮುಖ್ಯಸ್ಥರು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ತಮ್ಮ ಉಪ ಮತ್ತು ಇತರ ಸದಸ್ಯರೊಂದಿಗೆ ಸಭೆ ನಡೆಸುತ್ತಿದ್ದರು. ಘಟನೆಯಲ್ಲಿ ಮೊದಲು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಸಾವಿನ ಸಂಖ್ಯೆ ಹತ್ತಕ್ಕೇರಿದೆ. ಸಾವಿಗೀಡಾದ ಅಧಿಕಾರಿಗಳನ್ನು ಇರಾನ್ 'ಹುತಾತ್ಮರು' ಎಂದು ಬಣ್ಣಿಸಿದೆ.
ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ರಾಮಿ ಅಬ್ದುಲ್ ರಹಮಾನ್ ಸ್ಪಷ್ಟಪಡಿಸಿದ್ದಾರೆ. ಕಟ್ಟಡ ಕುಸಿತದಿಂದಾಗಿ ಕೆಲವರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡರು. ಅವರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮ ವರದಿಗಳಂತೆ, ಇಸ್ರೇಲ್ ದಾಳಿ ಮಾಡಿದ ಪ್ರದೇಶವನ್ನು 'ಭಾರಿ ಭದ್ರತಾ ವಲಯ'ವೆಂದು ಪರಿಗಣಿಸಲಾಗಿದೆ. ಇದು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಅನೇಕ ನಾಯಕರು ಮತ್ತು ಹಮಾಸ್‌ನ ಬೆಂಬಲಿಗರ ನೆಲೆಯೂ ಹೌದು. ಇದೇ ಕಾರಣಕ್ಕೆ ಇಸ್ರೇಲ್ ಗುರುತಿಸಿ ವೈಮಾನಿಕ ದಾಳಿ ನಡೆಸಿದೆ ಎನ್ನಲಾಗುತ್ತಿದೆ.
ಕಳೆದ ದಶಕದಲ್ಲಿ ಸಿರಿಯಾದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು. ವಿಶೇಷವಾಗಿ, ಇರಾನ್ ಬೆಂಬಲಿತ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡಿತ್ತು. ಇದೀಗ ಅಕ್ಟೋಬರ್ 7ರ ಹಮಾಸ್ ದಾಳಿಯ ನಂತರ ಇಸ್ರೇಲ್ ದಾಳಿಗಳು ತೀವ್ರಗೊಂಡಿವೆ. ಯುದ್ಧದ ಸಮಯದಲ್ಲಿ ಸಿರಿಯನ್ ವಿಮಾನ ನಿಲ್ದಾಣಗಳಿಂದ ಹಿಡಿದು ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ನೆಲೆಗಳವರೆಗೂ ಇಸ್ರೇಲ್ ತನ್ನ ಗುರಿಯಾಗಿಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ ಇಸ್ರೇಲ್, ಲೆಬನಾನ್‌ನ ಬೈರುತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಸಲೇಹ್ ಅರೂರಿ ಎಂಬವರನ್ನು ಹತ್ಯೆ ಮಾಡಿತ್ತು.
ಇದನ್ನೂ ಓದಿ: ಪಂಜಾಬ್ ಗಡಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ವಶ: ಭಾರಿ ಬಿಗಿ ಭದ್ರತೆ..