ಬೀಜಿಂಗ್(ಚೀನಾ): ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ 7.1 ತೀವ್ರತೆಯ ಭೂಕಂಪ ಜರುಗಿದೆ. ಈ ಅನಾಹುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ಮಾಹಿತಿ ನೀಡಿದೆ. ಅಕ್ಸು ಪ್ರಾಂತ್ಯದ ವುಶು ಕೌಂಟಿಯಲ್ಲಿ ಸ್ಥಳೀಯ ಕಾಲಮಾನ 2 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರವನ್ನು ಉಲ್ಲೇಖಿಸಿ ಕ್ಸಿನ್‌ಹುವಾ ವರದಿ ಮಾಡಿದೆ.
ಇನ್ನು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ, ಭೂಕಂಪದ ಕೇಂದ್ರಬಿಂದುವು 80 ಕಿ.ಮೀ ಆಳದಲ್ಲಿದೆ ಎಂದು ಹೇಳಿದೆ.
ನಾಲ್ವರಿಗೆ ಗಾಯ, ಕುಸಿದು ಬಿದ್ದ ಮನೆಗಳು: ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದ ಸರ್ಕಾರವು ಅಧಿಕೃತ ವೈಬೊ ಖಾತೆಯಲ್ಲಿ, ''ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೋಸ್ಟ್ ಮಾಡಿದೆ. 47 ಮನೆಗಳು ಕುಸಿದಿವೆ. 78 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಕೆಲವು ಕೃಷಿ ಕಟ್ಟಡಗಳು ಕುಸಿದಿವೆ. 7.1 ತೀವ್ರತೆಯ ಭೂಕಂಪವು ರಾತ್ರಿ 2 ಗಂಟೆಯ ನಂತರ ಅಕ್ಸು ಪ್ರಾಂತ್ಯದ ಮ್ಯಾಂಡರಿನ್‌ನ ವುಶಿ ಕೌಂಟಿ ಎಂದು ಕರೆಯಲ್ಪಡುವ ಉಚ್ತುರ್ಪಾನ್ ಕೌಂಟಿಯಲ್ಲಿ ಸಂಭವಿಸಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ ಮಾಹಿತಿ ಒದಗಿಸಿದೆ. ಸಿಸಿಟಿವಿ ನ್ಯೂಸ್ ಪ್ರಕಾರ, 200 ಜನರನ್ನು ತಕ್ಷಣವೇ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭೂಕಂಪನ ಸಕ್ರಿಯ ಪ್ರದೇಶವಾಗಿರುವ ಟಿಯಾನ್ ಶಾನ್ ಪರ್ವತ ಶ್ರೇಣಿಯಲ್ಲಿ ಭುವಿಯೊಡಲು ನಡುಗಿದೆ. ಪ್ರಬಲ ಗಾತ್ರದ ಭೂಕಂಪಗಳು ಅಪರೂಪವಾಗಿ ಸಂಭವಿಸುತ್ತವೆ. ಈ ಹಿಂದೆ, ಈ ಪ್ರದೇಶದಲ್ಲಿ ಅತಿದೊಡ್ಡ ಭೂಕಂಪ 1978ರಲ್ಲಿ ಸಂಭವಿಸಿತ್ತು ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಮುಖ್ಯ ಭೂಕಂಪದ ನಂತರ, ನೆರೆದೇಶಗಳಾದ ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನ್‌ನಲ್ಲಿ 4.5ರಷ್ಟು ತೀವ್ರತೆಯ ಭೂಕಂಪ ಘಟಿಸಿದೆ. ಕಝಕ್ ರಾಜಧಾನಿ ಅಲ್ಮಾಟಿಯಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.
ಚೀನಾದ ವಾಯುವ್ಯ ಪ್ರಾಂತ್ಯದ ಗನ್ಸು ಎಂಬಲ್ಲಿ ಡಿಸೆಂಬರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಭೀಕರ ಪ್ರಾಕೃತಿಕ ವಿಪತ್ತಿನಿಂದ ಅನೇಕ ಕಟ್ಟಡಗಳು ಕುಸಿದು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಇದರಿಂದ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಈ ಭೂಕಂಪದಿಂದಾಗಿ 110 ಜನರು ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿತ್ತು.
ಇದನ್ನೂ ಓದಿ: ಬ್ರೆಜಿಲ್ನಲ್ಲಿ ಭೂಕಂಪನ, ಚಂಡಮಾರುತದ ಅಬ್ಬರ; ಮೂವರು ಸಾವು