ವಾಷಿಂಗ್ಟನ್, ಅಮೆರಿಕ: ಮೊದಲ ದಿನವೇ ಕಮಾಲ್ ಮಾಡಲು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಸನ್ನದ್ಧರಾಗಿದ್ದಾರೆ. ಜನವರಿ 20ರಂದು ಅಂದರೆ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಿದ ಮರುಗಳಿಗೆಯಲ್ಲಿ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲು ಅವರು ಯೋಜಿಸಿದ್ದಾರೆ.
ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಖಾಸಗಿ ಸಭೆಯಲ್ಲಿ ರಿಪಬ್ಲಿಕನ್ ಸೆನೆಟರ್‌ಗಳಿಗೆ ಟ್ರಂಪ್ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಆದರೆ, ಈಗ ಅವರ ಕಾರ್ಯಕಾರಿಣಿ ಒಂದು ನಿಮಿಷವೂ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ನಿಕಟವರ್ತಿಗಳ ಪ್ರಕಾರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳಂತೆ ಡೊನಾಲ್ಡ್ ಟ್ರಂಪ್, ಅಧಿಕಾರ ಆರಂಭದ ದಿನವೇ ಕಾರ್ಯಕಾರಿ ಆದೇಶಗಳನ್ನು ಹೊರಡಿಸಲಾಗುತ್ತದೆ ಹಾಗೂ ಪ್ರಮುಖವಾಗಿ ಏಳು ಅಂಶಗಳ ಮೇಲೆ ಅವರು ಕಾರ್ಯಕಾರಿ ಆದೇಶ ಹೊರಡಿಸುತ್ತಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ದೇಶದ ದಕ್ಷಿಣ ಗಡಿ ಮುಚ್ಚುವುದು ಅವರ ಮೊದಲ ಆದ್ಯತೆ ಆಗಿದೆ. ವಲಸಿಗರ ಗಡಿಪಾರು, ತೃತೀಯ ಲಿಂಗಿಗಳ ಹಕ್ಕುಗಳಿಗೆ ಕಡಿವಾಣ, ತೈಲ ತೆಗೆಯುವಿಕೆ ಹೆಚ್ಚಳ, ಸರ್ಕಾರದ ದಕ್ಷತೆ ಸುಧಾರಣೆ, ಕ್ಷಮಾದಾನದಂತಹ ಪ್ರಮುಖ ನಿರ್ಣಯಗಳನ್ನು ಮೊದಲ ದಿನವೇ ತೆಗೆದುಕೊಳ್ಳಲು ಟ್ರಂಪ್ ನಿರ್ಧರಿಸಿದ್ದಾರೆ.
2021ರ ಕಾಪಿಟಲ್ ಹಿಲ್ಸ್ ದಾಳಿ ಸಂಬಂಧಿತ ಆರೋಪಿಗಳಿಗೆ ಕ್ಷಮಾದಾನ; 2021ರಲ್ಲಿ ಮತದಾರರ ತೀರ್ಪನ್ನು ವಿರೋಧಿಸಿ ಸಾವಿರಾರು ಟ್ರಂಪ್ ಬೆಂಬಲಿಗರು ಜನವರಿ 6, 2021 ರಂದು ವಾಷಿಂಗ್ಟನ್‌ನ ಕಾಪಿಟಲ್ ಹಿಲ್ಸ್ ಗೆ ಮುತ್ತಿಗೆ ಹಾಕಿ ಗಲಭೆ ನಡೆಸಿದ್ದರು. ರಿಪಬ್ಲಿಕನ್ ಪಕ್ಷದ ಸೋಲು ಒಪ್ಪಿಕೊಳ್ಳುವ ಬದಲು, ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಆಗ್ರಹಿಸಿ ಹಿಂಸಾಚಾರ ನಡೆಸಿದ್ದರು. ತಮ್ಮ ಅಧಿಕಾರ ಸ್ವೀಕಾರದ ಮೊದಲ ದಿನವೇ ಈಗಾಗಲೇ ತಪ್ಪಿತಸ್ಥರೆಂದು ಸಾಬೀತಾಗಿರುವ 1500 ಮಂದಿಗೆ ಕ್ಷಮಾದಾನ ನೀಡುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಅಮೆರಿಕ ಮಿಲಿಟರಿಯಲ್ಲಿ ಟ್ರಾನ್ಸ್ ಜೆಂಡರ್ ಗಳನ್ನು ನಿಷೇಧಿಸುವುದು ಅವರ ಇನ್ನೊಂದು ಆಲೋಚನೆಯಾಗಿದೆ. ಹೀಗಾದರೆ ಒಂದೇ ಬಾರಿಗೆ 15,000 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.
ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ನಿರ್ಧಾರ: ವಲಸಿಗರನ್ನು ಬಲವಂತವಾಗಿ ಗಡಿಪಾರು ಮಾಡಲು ಟ್ರಂಪ್ ಈಗಾಗಲೇ ನಿರ್ಧರಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 10 ಮಿಲಿಯನ್ ಅಕ್ರಮ ವಿದೇಶಿಯರು ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರನ್ನು ಬಲವಂತವಾಗಿ ದೇಶದಿಂದ ಹೊರಹಾಕಲಾಗುವುದು ಎಂದು ಟ್ರಂಪ್ ಪದೇ ಪದೇ ತಮ್ಮ ಭಾಷಣದಲ್ಲಿ ಹೇಳಿದ್ದರು. ಮತ್ತೊಂದೆಡೆ, ಗಡಿ ನೀತಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಅಧ್ಯಕ್ಷ ಬೈಡನ್ ಅವರ ನಿರ್ಧಾರಗಳನ್ನು ಟ್ರಂಪ್ ರಿವರ್ಸ್ ಮಾಡುವ ಸಾಧ್ಯತೆಯಿದೆ. ಅಮೆರಿಕ - ಮೆಕ್ಸಿಕೋ ಗಡಿಗೆ ಹೆಚ್ಚುವರಿ ಪಡೆಗಳನ್ನು ಸ್ಥಳಾಂತರಿಸಲು ಮತ್ತು ಗಡಿ ಗೋಡೆಯನ್ನು ಪುನರ್ನಿರ್ಮಿಸಲು ಅವರು ಗಮನಹರಿಸಲಿದ್ದಾರೆ ಎಂದು ವರದಿಯಾಗಿದೆ.
ಕೆಲ ದೇಶಗಳ ವಸ್ತುಗಳ ಮೇಲೆ ಸುಂಕ: ಚೀನಾ, ಮೆಕ್ಸಿಕೊ ಮತ್ತು ಕೆನಡಾದಂತಹ ದೇಶಗಳ ಮೇಲೆ ಈ ಹಿಂದೆ ಘೋಷಿಸಲಾದ ಸುಂಕಗಳಿಗೆ ಟ್ರಂಪ್ ಸಹಿ ಹಾಕುವ ಸಾಧ್ಯತೆಯಿದೆ. ಈ ಹಿಂದೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಟ್ರಂಪ್ ಹೆಚ್ಚಿನ ಸುಂಕವನ್ನು ವಿಧಿಸಿದ್ದರು. ಅಧಿಕಾರಕ್ಕೆ ಬಂದರೆ ಮತ್ತೆ ಜಾರಿಗೆ ತರುವುದಾಗಿ ಘೋಷಿಸಿದ್ದರು. ಇಂತಹ ಸುಂಕ ವಿಧಿಸಿದರೆ ಅಮೆರಿಕಕ್ಕೆ ಸಾಕಷ್ಟು ಲಾಭವಾಗಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಹಾಗಾಗಿಯೇ ಮೊದಲ ದಿನವೇ ಸುಂಕ ಏರಿಸಲು ಮುಂದಾಗಿದ್ದಾರೆ. ನೆರೆಯ ರಾಷ್ಟ್ರಗಳಾದ ಕೆನಡಾ, ಮೆಕ್ಸಿಕೋಗಳಿಗೂ ಬಿಗ್ ಶಾಕ್ ನೀಡಲು ನೂತನ ಅಧ್ಯಕ್ಷರು ಸನ್ನದ್ಧರಾಗಿದ್ದಾರೆ. ಆ ದೇಶಗಳಿಂದ ಅಮೆರಿಕಕ್ಕೆ ಕ್ರಿಮಿನಲ್‌ಗಳು ಮತ್ತು ಡ್ರಗ್ಸ್‌ಗಳ ಪ್ರವೇಶವನ್ನು ನಿಲ್ಲಿಸುವವರೆಗೆ 25 ಪ್ರತಿಶತ ಆಮದು ಸುಂಕವನ್ನು ವಿಧಿಸುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ.
ದೇಶೀಯ ತೈಲ ಹೊರತೆಗೆಯುವಿಕೆಯನ್ನು ಹೆಚ್ಚಿಸುವ ಬೈಡನ್ ನಿರ್ಧಾರವ್ನು ಟ್ರಂಪ್ ಹಿಂತೆಗೆದುಕೊಳ್ಳುತ್ತಾರೆ ಎಂದು ತೋರುತ್ತದೆ. ಹೀಗೆ ಮಾಡುವುದರಿಂದ ಮಾತ್ರ ಇಂಧನ ವೆಚ್ಚ ಕಡಿಮೆಯಾಗುತ್ತದೆ ಎಂಬುದು ಅವರ ವಾದ. ವಾಸ್ತವವಾಗಿ, ಬೈಡನ್ ಸರ್ಕಾರವು ಮಾಲಿನ್ಯ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಪವನ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪೆಟ್ರೋಲ್-ಡೀಸೆಲ್ ಕಾರುಗಳ ಬದಲಿಗೆ EV ಗಳನ್ನು ಉತ್ತೇಜಿಸುವಂತಹ ಅನೇಕ ಉಪಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಟ್ರಂಪ್ ಮೊದಲ ದಿನವೇ ಬೈಡನ್ ಅವರ ಎಲ್ಲಾ ನೀತಿಗಳನ್ನು ರದ್ದುಗೊಳಿಸುವ ಆದೇಶಗಳನ್ನು ಹೊರಡಿಸುವ ಸಾಧ್ಯತೆಯಿದೆ.
ಇದನ್ನು ಓದಿ: ಸೋಮವಾರ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ: ಮೊದಲ ದಿನವೇ ಮಹತ್ವದ ಆದೇಶಕ್ಕೆ ಸಜ್ಜು