ಗಾಜಾ : ಗಾಜಾದ ಒಳಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವುದು ಬಹುತೇಕ ಅಸಾಧ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಹೇಳಿದೆ. ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಈಗಲೂ ಭೀಕರ ಸಂಘರ್ಷ ಮುಂದುವರೆದಿರುವುದರಿಂದ ಪರಿಹಾರ ಸಾಮಗ್ರಿಗಳ ಆಗಮನದಲ್ಲಿ ವ್ಯತ್ಯಯವಾಗುತ್ತಿದೆ ಹಾಗೂ ಸಂಪರ್ಕ ವ್ಯವಸ್ಥೆಗಳು ಕಡಿತವಾಗಿರುವುದರಿಂದ ಪರಿಹಾರ ಸಾಮಗ್ರಿಗಳ ಸಾಗಣೆಗೆ ಅಡ್ಡಿಯಾಗಿದೆ ಎಂದು ಅದು ತಿಳಿಸಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಬಗ್ಗೆ ಗುರುವಾರ ಪೋಸ್ಟ್ ಮಾಡಿರುವ ಒಸಿಎಚ್ಎ, "ಗಾಜಾದ ಒಳಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ಪ್ರಮುಖ ಮಾರ್ಗಗಳನ್ನು ಹಲವಾರು ದಿನಗಳಿಂದ ಮುಚ್ಚಲಾಗಿದೆ. ಅಲ್ಲದೆ ಈಗ ಪ್ಯಾಲೆಸ್ಟೈನ್ ಪ್ರದೇಶವು ಸುರಕ್ಷಿತವಾಗಿಲ್ಲ ಮತ್ತು ಅಲ್ಲಿ ಕೆಲಸ ಮಾಡುವುದೂ ಅಸಾಧ್ಯವಾಗಿದೆ" ಎಂದು ಹೇಳಿದೆ.
ಇಸ್ರೇಲ್ ಹತ್ತಿರದ ಮಿಲಿಟರಿ ಪಾಯಿಂಟ್ ಮೇಲೆ ಹಮಾಸ್ ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್ ನಾಲ್ವರು ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೇ 5 ರಿಂದ ಇಸ್ರೇಲ್ ಕೆರೆಮ್ ಶಾಲೋಮ್ ಕ್ರಾಸಿಂಗ್ ಅನ್ನು ಬಂದ್ ಮಾಡಿದೆ. ಗಾಜಾದೊಳಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಉಳಿದಿದ್ದ ಏಕೈಕ ಕ್ರಾಸಿಂಗ್ ಇದಾಗಿತ್ತು.
ಮೇ 8 ರಂದು ಕ್ರಾಸಿಂಗ್ ಅನ್ನು ಸ್ವಲ್ಪ ಸಮಯದವರೆಗೆ ತೆರೆದಾಗ ಹಮಾಸ್ ಉಗ್ರರು ದಕ್ಷಿಣ ಗಾಜಾದ ರಫಾದಿಂದ ಇಸ್ರೇಲ್ನ ಕೆರೆಮ್ ಶಾಲೋಮ್ ಕ್ರಾಸಿಂಗ್ ಪ್ರದೇಶದ ಮೇಲೆ ಎಂಟು ರಾಕೆಟ್ಗಳನ್ನು ಹಾರಿಸಿದ್ದರು. ಇದರ ನಂತರ ಇಸ್ರೇಲ್ ಈ ಕ್ರಾಸಿಂಗ್ ಅನ್ನು ಮತ್ತೆ ಮುಚ್ಚಿದೆ. ಹೀಗಾಗಿ ಈಜಿಪ್ಟ್ನಿಂದ ರಫಾ ಮೂಲಕ ಪರಿಹಾರ ಸಾಮಗ್ರಿಯ ಟ್ರಕ್ಗಳು ಒಳಗೆ ಬರಲು ದಾರಿ ಇಲ್ಲದಂತಾಗಿದೆ.
ಯುದ್ಧ ಪೀಡಿತ ಗಾಜಾದ ಗಡಿಗಳನ್ನು ಮುಚ್ಚುವುದರಿಂದ ಅಲ್ಲಿ ವಾಸಿಸುತ್ತಿರುವ 20 ಲಕ್ಷಕ್ಕೂ ಅಧಿಕ ನಾಗರಿಕರ ಜೀವಕ್ಕೆ ಕುತ್ತು ಬರಬಹುದು ಎಂದು ಒಸಿಎಚ್ಎ ಮತ್ತು ಇತರ ಮಾನವೀಯ ಸಂಸ್ಥೆಗಳು ಎಚ್ಚರಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏತನ್ಮಧ್ಯೆ ದಕ್ಷಿಣ ಗಾಜಾದ ವಿವಿಧ ಸ್ಥಳಗಳ ಮೇಲೆ ವಿಮಾನದ ಮೂಲಕ ಮೂರು ಬಾರಿ ಪರಿಹಾರ ಸಾಮಗ್ರಿಗಳನ್ನು ಡ್ರಾಪ್ ಮಾಡಲಾಗಿದೆ ಎಂದು ಜೋರ್ಡಾನ್ ಸಶಸ್ತ್ರ ಪಡೆಗಳು ಗುರುವಾರ ತಿಳಿಸಿವೆ.
ಗಾಜಾದ ನೈಋತ್ಯ ಕರಾವಳಿಯ ಬಯಲು ಪ್ರದೇಶವಾದ ಅಲ್-ಮವಾಸಿ ಬಳಿ ವಿಮಾನಗಳು ಪ್ಯಾರಾಚೂಟ್ಗಳ ಮೂಲಕ ಆಹಾರ ಸಾಮಗ್ರಿಗಳ ಪ್ಯಾಕೆಟ್ಗಳನ್ನು ಇಳಿಸಿರುವುದನ್ನು ನೋಡಿರುವುದಾಗಿ ಗಾಜಾದ ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ವಾರ ದಕ್ಷಿಣ ಗಾಜಾ ನಗರದ ಮೇಲೆ ಇಸ್ರೇಲಿ ಸೇನೆ ಮತ್ತೊಮ್ಮೆ ದಾಳಿ ಆರಂಭಿಸಿದ ನಂತರ ರಫಾದಲ್ಲಿ ಪರಿಹಾರ ಸಾಮಗ್ರಿಗಳು ಏರ್ಡ್ರಾಪ್ ಆಗಿರುವುದು ಇದೇ ಮೊದಲ ಬಾರಿಯಾಗಿದೆ.
ಇದನ್ನೂ ಓದಿ : ಮೆಕ್ಸಿಕೊ ಕೊಲ್ಲಿಯಲ್ಲಿ ಸೇತುವೆಗೆ ಬಾರ್ಜ್ ಡಿಕ್ಕಿ: ಸಮುದ್ರ ಸೇರಿದ 2 ಸಾವಿರ ಗ್ಯಾಲನ್ ತೈಲ - Barge Hits Bridge