ಢಾಕಾ : ರೆಮಾಲ್ ಚಂಡಮಾರುತವು ಗಂಟೆಗೆ 130 ಕಿ.ಮೀ ವೇಗದಲ್ಲಿ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಹೆಚ್ಚಿನ ಅನಾಹುತ ತಡೆಯಲು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತವು ಭಾನುವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ದೇಶದ ಕರಾವಳಿಯ ಮೇಲಿಂದ ದಾಟಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದ ಅಪಾಯಗಳ ಬಗ್ಗೆ ಬಾಂಗ್ಲಾದೇಶ ಹವಾಮಾನ ಇಲಾಖೆ ಭಾನುವಾರ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ದೇಶದ ಕರಾವಳಿ ಜಿಲ್ಲೆಗಳು ಮತ್ತು ಬಂದರುಗಳಿಗೆ ಅತಿದೊಡ್ಡ ಅಪಾಯದ ಸಂಕೇತ ಸಂಖ್ಯೆ 10ರ ಮಟ್ಟದ ಎಚ್ಚರಿಕೆ ರವಾನಿಸಲಾಗಿದೆ. ಮುಂದಿನ ಸೂಚನೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕೆ ದೋಣಿಗಳು, ಟ್ರಾಲರ್ ಗಳು ಮತ್ತು ಕಡಲ ಹಡಗುಗಳಿಗೆ ಸೂಚಿಸಲಾಗಿದೆ.
ಸ್ಥಳೀಯ ಕಾಲಮಾನ ಭಾನುವಾರ ಬೆಳಿಗ್ಗೆ 9.00 ಗಂಟೆಗೆ ಚಂಡಮಾರುತವು ದಕ್ಷಿಣ ಖುಲ್ನಾ ಪ್ರದೇಶದ ಬಾಂಗ್ಲಾದೇಶದ ಮೊಂಗ್ಲಾ ಬಂದರಿನ ದಕ್ಷಿಣಕ್ಕೆ 295 ಕಿ.ಮೀ ಮತ್ತು ಆಗ್ನೇಯ ಬಾಂಗ್ಲಾದೇಶದ ಚಟ್ಟೋಗ್ರಾಮ್ ಬಂದರಿನ ನೈಋತ್ಯಕ್ಕೆ 380 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಬಿಎಂಡಿ ಹವಾಮಾನ ತಜ್ಞ ಕೆ.ಎಚ್. ಹಫೀಜುರ್ ರಹಮಾನ್ ಅವರು ಹೊರಡಿಸಿದ ಬುಲೆಟಿನ್ ತಿಳಿಸಿದೆ.
ಚಂಡಮಾರುತದಿಂದ ಅತ್ಯಧಿಕ ಅಪಾಯಕ್ಕೊಳಗಾಗಬಹುದಾದ ಹತ್ತು ಜಿಲ್ಲೆಗಳಿಂದ ಕನಿಷ್ಠ 8,00,000 ಜನರನ್ನು ಈಗಾಗಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಮೊಹಮ್ಮದ್ ಮೊಹಿಬುರ್ ರಹಮಾನ್ ಕ್ಸಿನ್ಹುವಾಗೆ ತಿಳಿಸಿದ್ದಾರೆ.
ಬಾಂಗ್ಲಾದೇಶದ ನೌಕಾಪಡೆ, ಕೋಸ್ಟ್ ಗಾರ್ಡ್, ಪೊಲೀಸ್, ಸ್ವಯಂಸೇವಾ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಜನರನ್ನು ಸ್ಥಳಾಂತರಿಸುವ ಬೃಹತ್ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ ಎಂದು ಅವರು ಹೇಳಿದರು.
ಈಗಾಗಲೇ ಕರಾವಳಿ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವ್ಯಾಪಕ ಪ್ರವಾಹ ಉಂಟಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತೀವ್ರ ಚಂಡಮಾರುತದ ಬಾಹ್ಯ ಪರಿಣಾಮ ಮತ್ತು ತೀವ್ರ ಒತ್ತಡದ ಏರಿಳಿತದಿಂದಾಗಿ, ಕರಾವಳಿ ಜಿಲ್ಲೆಗಳಾದ ಖುಲ್ನಾ ಮತ್ತು ಚಟ್ಟೋಗ್ರಾಮ್ನ ತಗ್ಗು ಪ್ರದೇಶಗಳು ಸಾಮಾನ್ಯ ಖಗೋಳ ಉಬ್ಬರವಿಳಿತಕ್ಕಿಂತ 8 ರಿಂದ 12 ಅಡಿ ಎತ್ತರದ ಸಮುದ್ರದ ಅಲೆಗಳಿಂದ ಮುಳುಗುವ ಸಾಧ್ಯತೆಯಿದೆ ಎಂದು ಬುಲೆಟಿನ್ ತಿಳಿಸಿದೆ.
ಚಟ್ಟೋಗ್ರಾಮ್ನ ಶಾ ಅಮಾನತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾನುವಾರ ಮಧ್ಯಾಹ್ನದಿಂದ ಎಂಟು ಗಂಟೆಗಳ ಕಾಲ ತನ್ನ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. 2007 ರಲ್ಲಿ ಸಿದರ್ ಚಂಡಮಾರುತ ದೇಶದ ನೈಋತ್ಯ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ 4,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಅಥವಾ ಕಾಣೆಯಾಗಿದ್ದರು.
ಇದನ್ನೂ ಓದಿ : ಮೂರು ವಾರಗಳ ನಂತರ ಈಜಿಪ್ಟ್ನಿಂದ ಗಾಜಾಗೆ ಪರಿಹಾರ ಸಾಮಗ್ರಿ ಪೂರೈಕೆ ಪುನಾರಂಭ - GAZA AID DELIVERIES RESTART