ಕರಾಚಿ : ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಯು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನೀ ಪ್ರಜೆಗಳ ಜಂಘಾಬಲವನ್ನೇ ಅಲುಗಾಡಿಸಿದೆ. ತಮ್ಮ ವಿರುದ್ಧ ಪದೇ ಪದೆ ನಡೆಯುತ್ತಿರುವ ಆತ್ಮಾಹುತಿ ದಾಳಿಗಳಿಂದ ಕಂಗಾಲಾಗಿರುವ ಹಲವಾರು ಚೀನಿ ಪ್ರಜೆಗಳು ಪಾಕಿಸ್ತಾನದಿಂದ ಮರಳಿ ಹೋಗಲು ಬಯಸುತ್ತಿದ್ದಾರೆ ಎಂದು ಪಾಕಿಸ್ತಾನದ ಭದ್ರತಾ ವಿಶ್ಲೇಷಕರು ಹೇಳಿದ್ದಾರೆ. ಚೀನಿ ಪ್ರಜೆಗಳ ವಿರುದ್ಧ ದಾಳಿ ಮಾಡುವುದು ಮಾತ್ರವಲ್ಲದೆ ಪಾಕಿಸ್ತಾನದಲ್ಲಿ ಚೀನಾ ನಿರ್ಮಾಣ ಮಾಡುತ್ತಿರುವ ಮೂಲಸೌಕರ್ಯ ಯೋಜನೆಗಳನ್ನು ಸಹ ಭಯೋತ್ಪಾದಕರು ಹಾಳು ಮಾಡುತ್ತಿದ್ದಾರೆ.
ದಾಳಿಯ ಹಿಂದಿನ ಭಯೋತ್ಪಾದಕರನ್ನು ಬಂಧಿಸಿ ಅವರಿಗೆ ಶಿಕ್ಷೆ ವಿಧಿಸುವುದಾಗಿ ಪಾಕಿಸ್ತಾನ ಸರ್ಕಾರ ಪದೇ ಪದೇ ಹೇಳಿದೆ. ಆದಾಗ್ಯೂ ಇತ್ತೀಚಿನ ಆತ್ಮಾಹುತಿ ದಾಳಿಯ ಘಟನೆಯು ಪಾಕಿಸ್ತಾನ ಸರ್ಕಾರದ ಮೇಲೆ ಚೀನಾ ಪ್ರಜೆಗಳ ನಂಬಿಕೆ ಅಲ್ಲಾಡುವಂತೆ ಮಾಡಿದೆ.
ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಕೂಡ ಈ ಬಗ್ಗೆ ವ್ಯಾಪಕ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಚೀನಿ ಪ್ರಜೆಗಳನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿದೆ ಎಂದು ಪಾಕಿಸ್ತಾನದ ಭದ್ರತಾ ವಿಶ್ಲೇಷಕ ಮುಹಮ್ಮದ್ ಅಮೀರ್ ರಾಣಾ ಡಾನ್ ನಲ್ಲಿ ಬರೆದಿದ್ದಾರೆ.
ಶಾಂಗ್ಲಾ ಪ್ರದೇಶದಲ್ಲಿ ಚೀನಾದ ಎಂಜಿನಿಯರ್ಗಳ ವಾಹನದ ನಡೆದ ಭೀಕರ ಭಯೋತ್ಪಾದಕ ದಾಳಿಯು ಬಹಳಷ್ಟು ಪರಿಣಾಮ ಬೀರಿದೆ. ಚೀನಾದ ಕಂಪನಿಗಳು ಕನಿಷ್ಠ ಮೂರು ಪ್ರಮುಖ ಜಲವಿದ್ಯುತ್ ಯೋಜನೆಗಳ ಕೆಲಸವನ್ನು ಸ್ಥಗಿತಗೊಳಿಸಿವೆ. ದಾಸು ಅಣೆಕಟ್ಟು, ಡಯಾಮರ್-ಬಾಷಾ ಅಣೆಕಟ್ಟು ಮತ್ತು ತರ್ಬೆಲಾ ಅಣೆಕಟ್ಟು 5 ನೇ ವಿಸ್ತರಣೆಯಲ್ಲಿ ಕೆಲಸ ಸ್ಥಗಿತವಾಗಿದೆ.
ಚೀನಾದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ ಐವರು ಚೀನೀ ಪ್ರಜೆಗಳು ಮತ್ತು ವಾಹನದ ಪಾಕಿಸ್ತಾನಿ ಚಾಲಕ ಸಾವನ್ನಪ್ಪಿದ ಘಟನೆ ದಾಸು ವಲಯದಲ್ಲಿ ಮಾರ್ಚ್ 26ರಂದು ನಡೆದಿತ್ತು. ಪಾಕಿಸ್ತಾನದಲ್ಲಿ ಕಳೆದ ಕೆಲವು ವಾರಗಳಲ್ಲಿ ನಡೆದ ಮೂರನೇ ಭಯೋತ್ಪಾದಕ ದಾಳಿ ಇದಾಗಿದೆ.
ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಶಾಂಗ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರು ದಾಸು ಅಣೆಕಟ್ಟಿಗೆ ತೆರಳುತ್ತಿದ್ದ ನಿರ್ಮಾಣ ಕಾರ್ಮಿಕರು ಮತ್ತು ಎಂಜಿನಿಯರ್ಗಳು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಬಖತ್ ಜಹೀರ್ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ತಾಲಿಬಾನ್ ಉಗ್ರರ ದಾಳಿಗಳು ಹೆಚ್ಚಾಗುತ್ತಿರುವುದು ಪಾಕಿಸ್ತಾನ ಸರ್ಕಾರಕ್ಕೆ ಆತಂಕ ಮೂಡಿಸಿದೆ.
ಇದನ್ನೂ ಓದಿ : ಅಲ್-ಶಿಫಾ ಆಸ್ಪತ್ರೆಯಲ್ಲಿ ಅಡಗಿದ್ದ 4 ಹಮಾಸ್ ನಾಯಕರನ್ನು ಹತ್ಯೆಗೈದ ಇಸ್ರೇಲ್