ರಿಯೋ ಡಿ ಜನೈರೊ: ಭಾರೀ ಮಳೆ ಮತ್ತು ಪ್ರವಾಹಕ್ಕೆ ಬ್ರೆಜಿಲ್‌ನ ದಕ್ಷಿಣ ಭಾಗ ಅಕ್ಷರಶಃ ತತ್ತರಿಸಿದೆ. ಇಲ್ಲಿನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಈಗಾಗಲೇ 75 ಮಂದಿ ಮೃತಪಟ್ಟಿದ್ದಾರೆ. 103 ಮಂದಿ ನಾಪತ್ತೆಯಾಗಿದ್ದಾರೆ. ಕನಿಷ್ಠ 155 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿರಂತರ ಮಳೆಯಿಂದಾಗಿ 88 ಸಾವಿರಕ್ಕೂ ಹೆಚ್ಚಿನ ಜನರು ನಿರಾಶ್ರಿತರಾಗಿದ್ದು, 16,000 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಭೂಕುಸಿತ ಸೇರಿದಂತೆ ಹಲವೆಡೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ.
ರಕ್ಷಣಾ ಪಡೆಗಳು ಹೆಲಿಕಾಪ್ಟರ್‌ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಮಾಡುತ್ತಿವೆ. ಇದುವರೆಗೆ 1,15,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬ್ರೆಜಿಲ್‌ನ ಕಣಿವೆ ಪ್ರದೇಶಗಳು ಸೇರಿದಂತೆ ಪರ್ವತ ಇಳಿಜಾರುಗಳು ಮತ್ತು ನಗರಗಳಂತಹ ಕೆಲವು ಪ್ರದೇಶಗಳಲ್ಲಿ ಒಂದು ವಾರದೊಳಗೆ 300 ಮಿಲಿಮೀಟರ್‌ಗಳಿಗಿಂತ ಹೆಚ್ಚು (11.8 ಇಂಚುಗಳು) ಮಳೆ ಸುರಿದಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಟಿಯೊರಾಲಜಿ ಹೇಳಿದೆ. ಕಳೆದ ವರ್ಷ ಸಂಭವಿಸಿದ ಪ್ರವಾಹದಲ್ಲಿ 75 ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣ: ಕೆನಡಾದಲ್ಲಿ ಭಾರತೀಯ ಮೂಲದ ಮೂವರ ಬಂಧನ - Nijjar Murder Case