ಗೋಮಾ: ಪೂರ್ವ ಕಾಂಗೋದ ಉತ್ತರ ಕಿವು ಪ್ರಾಂತ್ಯದ ಸ್ಥಳಾಂತರಗೊಂಡ ನಿರಾಶ್ರಿತರ ಎರಡು ಶಿಬಿರಗಳ ಮೇಲೆ ಶುಕ್ರವಾರ ಬಾಂಬ್ ದಾಳಿಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕಿವು ಪ್ರಾಂತೀಯ ರಾಜಧಾನಿ ಗೋಮಾ ನಗರದ ಸಮೀಪವಿರುವ ಲ್ಯಾಕ್ ವರ್ಟ್ ಮತ್ತು ಮುಗುಂಗಾದಲ್ಲಿ ನಿರಾಶ್ರಿತರ ಎರಡು ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ಮಾನವ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದು ಯುದ್ಧ ಅಪರಾಧವಾಗಿದೆ ಎಂದು ವಿಶ್ವಸಂಸ್ಥೆ ಕಿಡಿಕಾರಿದೆ.
ಕಾಂಗೋಲೀಸ್ ಸೇನೆಯ ವಕ್ತಾರ, ಲೆಫ್ಟಿನೆಂಟ್ ಕರ್ನಲ್ ಎನ್ ಕೈಕೋ ಪ್ರತಿಕ್ರಿಯಿಸಿ, ರುವಾಂಡಾ ಜೊತೆ ಆಪಾದಿತ ಸಂಪರ್ಕಗಳನ್ನು ಹೊಂದಿರುವ M23 ಎಂದು ಕರೆಯಲ್ಪಡುವ ಬಂಡುಕೋರರು ಈ ದಾಳಿ ನಡೆದಿದೆ ಎಂದು ಆರೋಪಿಸಿದರು. ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಜೀನ್ ಜೊನಾಸ್ ಯೋವಿ ಟೊಸ್ಸಾ ತಿಳಿಸಿದರು.
ಕಾಂಗೋ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ ಹೇಳಿಕೆ: ಯುರೋಪ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಂಗೋ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ ಅವರು, ಬಾಂಬ್ ಸ್ಫೋಟದ ನಂತರ ಶುಕ್ರವಾರ ಸ್ವದೇಶಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂದು ಅವರ ಕಚೇರಿ ಹೇಳಿದೆ. ರುವಾಂಡಾ M23 ಬಂಡುಕೋರರನ್ನು ಬೆಂಬಲಿಸುವ ಮೂಲಕ ಕಾಂಗೋವನ್ನು ಅಸ್ಥಿರಗೊಳಿಸುತ್ತಿದೆ ಎಂದು ಫೆಲಿಕ್ಸ್ ತ್ಶಿಸೆಕೆಡಿ ಆರೋಪಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪ್ಯಾರಿಸ್‌ನಲ್ಲಿ ಫೆಲಿಕ್ಸ್ ತ್ಶಿಸೆಕೆಡಿ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ, M23 ಬಂಡಾಯ ಗುಂಪಿಗೆ ತನ್ನ ಬೆಂಬಲವನ್ನು ಹಿಂಪಡೆಯಲು ನೆರೆಯ ರುವಾಂಡಾಕ್ಕೆ ಕರೆ ನೀಡಿದ್ದರು.
M23 ಬಂಡುಕೋರರ ಗುಂಪು ಆಯಕಟ್ಟಿನ ಗಣಿಗಾರಿಕೆ ಪಟ್ಟಣವಾದ ರುಬಯಾವನ್ನು ವಶಪಡಿಸಿಕೊಂಡ ನಂತರ ಬಾಂಬ್ ಸ್ಫೋಟಗಳು ಸಂಭವಿಸಿವೆ. ಈ ಪಟ್ಟಣವು ಟ್ಯಾಂಟಲಮ್‌ನ ನಿಕ್ಷೇಪಗಳನ್ನು ಹೊಂದಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ.
ಪೂರ್ವ ಕಾಂಗೋದಲ್ಲಿನ ದಶಕಗಳ ಸಂಘರ್ಷವು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳನ್ನು ಉಂಟುಮಾಡಿದೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳು ಹೋರಾಡುತ್ತಿವೆ. ಹೆಚ್ಚಿನವು ಭೂಮಿ ಮತ್ತು ಬೆಲೆಬಾಳುವ ಖನಿಜಗಳೊಂದಿಗೆ ಗಣಿಗಳ ನಿಯಂತ್ರಣಕ್ಕಾಗಿ ಹಾಗೂ ಕೆಲವರು ತಮ್ಮ ಸಮುದಾಯಗಳನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದಾರೆ.
ಅನೇಕ ಗುಂಪುಗಳು ಸಾಮೂಹಿಕ ಹತ್ಯೆಗಳು, ಅತ್ಯಾಚಾರಗಳು ಮತ್ತು ಇತರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವೆ ಎಂಬ ಆರೋಪವಿದೆ. ಹಿಂಸಾಚಾರದ ಹಿನ್ನೆಲೆ ಸುಮಾರು 7 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಕಂದಕಕ್ಕೆ ಬಸ್ ಉರುಳಿ 20 ಪ್ರಯಾಣಿಕರ ಸಾವು: 15 ಮಂದಿಗೆ ಗಂಭೀರ ಗಾಯ - 20 people died