ಢಾಕಾ: ಬಾಂಗ್ಲಾದೇಶದಲ್ಲಿ 2025ರ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ಆಗಸ್ಟ್ ಕ್ರಾಂತಿಯ ನಂತರ ಸ್ಥಾಪಿಸಲಾದ ಬಾಂಗ್ಲಾದೇಶದ ಉಸ್ತುವಾರಿ ಸರ್ಕಾರದ ಮುಖ್ಯಸ್ಥ ಹಾಗೂ ಮಧ್ಯಂತರ ನಾಯಕ ಮುಹಮ್ಮದ್ ಯೂನುಸ್ ಸೋಮವಾರ ಹೇಳಿದರು.
ಚುನಾವಣೆಗೆ ಯೂನುಸ್ ಮೇಲೆ ಒತ್ತಡ: ಆಗಸ್ಟ್ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಜನರ ದಂಗೆಯ ನಂತರ ದೇಶದ ಮುಖ್ಯ ಸಲಹೆಗಾರರಾಗಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಯೂನುಸ್ ನೇಮಕವಾಗಿದ್ದಾರೆ. ದೇಶದಲ್ಲಿ ಹೊಸ ಸರ್ಕಾರ ಸ್ಥಾಪನೆಯ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವಂತೆ ಇತ್ತೀಚೆಗೆ ಅವರ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ.
ಮೈಕ್ರೋಫೈನಾನ್ಸ್ ಯೋಜನೆಯ ರೂವಾರಿ ಯೂನುಸ್: ಸುಮಾರು 170 ಮಿಲಿಯನ್ ಜನಸಂಖ್ಯೆಯ ದಕ್ಷಿಣ ಏಷ್ಯಾದ ರಾಷ್ಟ್ರ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಪುನಃ ಸ್ಥಾಪಿಸುವ ಅತ್ಯಂತ ಕಠಿಣ ಸವಾಲು ಈಗ ಯೂನುಸ್ ಮುಂದಿದೆ. ಸದ್ಯ 84 ವರ್ಷ ವಯಸ್ಸಿನ, ದೇಶದಲ್ಲಿ ಮೈಕ್ರೋಫೈನಾನ್ಸ್ ಯೋಜನೆಯನ್ನು ಜಾರಿಗೆ ತಂದ ಯೂನುಸ್ ಪ್ರಸ್ತುತ ತಾತ್ಕಾಲಿಕ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ.
"2025ರ ಅಂತ್ಯದ ವೇಳೆಗೆ ಅಥವಾ 2026ರ ಮೊದಲಾರ್ಧದಲ್ಲಿ ಚುನಾವಣೆಗಳು ನಡೆಯಬಹುದು" ಎಂದು ಅವರು ಸರ್ಕಾರಿ ಸ್ವಾಮ್ಯದ ಟಿವಿ ಪ್ರಸಾರದಲ್ಲಿ ಹೇಳಿದರು.
ಬಾಂಗ್ಲಾ ದಂಗೆಯಲ್ಲಿ ರಕ್ತಪಾತ: ಢಾಕಾದಲ್ಲಿರುವ ಪ್ರಧಾನಿ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿದ ಹಿನ್ನೆಲೆಯಲ್ಲಿ 77 ವರ್ಷದ ಹಸೀನಾ ಹೆಲಿಕಾಪ್ಟರ್ ಮೂಲಕ ನೆರೆಯ ಭಾರತಕ್ಕೆ ಪಲಾಯನ ಮಾಡಿದ್ದರು. ಹಸೀನಾರನ್ನು ಪದಚ್ಯುತಗೊಳಿಸುವ ಹಿಂದಿನ ಕೆಲ ವಾರಗಳಲ್ಲಿ ಪ್ರತಿಭಟನೆಗಳಲ್ಲಿ ನೂರಾರು ಜನ ಸಾವಿಗೀಡಾಗಿದ್ದರು. ಬಹುತೇಕರು ಪೊಲೀಸರ ಗುಂಡಿನ ದಾಳಿಯಿಂದ ಮೃತಪಟ್ಟಿದ್ದರು.
ಅವಾಮಿ ಲೀಗ್ ಪಕ್ಷದ ಪ್ರಮುಖರ ಹತ್ಯೆ: ಹಸೀನಾ ಅಧಿಕಾರದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ, ಅವರ ಅವಾಮಿ ಲೀಗ್ ಪಕ್ಷದ ಪ್ರಮುಖ ಬೆಂಬಲಿಗರನ್ನು ಪ್ರತೀಕಾರದ ಕೃತ್ಯಗಳಲ್ಲಿ ಹತ್ಯೆ ಮಾಡಲಾಯಿತು.
ಚುನಾವಣೆಗೂ ಮುನ್ನ ಸುಧಾರಣೆ: ಅಗತ್ಯ ಚುನಾವಣಾ ಸುಧಾರಣೆಗಳ ಮೇಲ್ವಿಚಾರಣೆಗಾಗಿ ಯೂನುಸ್ ಆಯೋಗಗಳನ್ನು ರಚಿಸಿದ್ದಾರೆ. ರಾಜಕೀಯ ಪಕ್ಷಗಳು ಅಭಿಪ್ರಾಯಗಳನ್ನು ಆಧರಿಸಿ ಚುನಾವಣಾ ದಿನಾಂಕ ನಿರ್ಧರಿಸಲಾಗುವುದು ಹಾಗೂ ಚುನಾವಣೆಗೂ ಮುನ್ನ ಸುಧಾರಣೆಗಳನ್ನು ಜಾರಿಗೆ ತರುವುದು ಅಗತ್ಯ ಎಂದು ಅವರು ತಿಳಿಸಿದರು.
ದೋಷರಹಿತ ಮತದಾರರ ಪಟ್ಟಿಯಂಥ ಕನಿಷ್ಠ ಸುಧಾರಣೆಗಳೊಂದಿಗೆ ತ್ವರಿತವಾಗಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಒಪ್ಪಿದರೆ, ನವೆಂಬರ್ ಅಂತ್ಯದ ವೇಳೆಗೆ ಚುನಾವಣೆ ನಡೆಸಬಹುದು ಎಂದು ಅವರು ಹೇಳಿದರು. ಆದರೆ ಚುನಾವಣಾ ಸುಧಾರಣೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವುದಾದರೆ ಚುನಾವಣೆ ಕೆಲವು ತಿಂಗಳು ವಿಳಂಬವಾಗಬಹುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಗೋಲನ್ ಹೈಟ್ಸ್ನಲ್ಲಿ ಜನವಸತಿ ದ್ವಿಗುಣಗೊಳಿಸುವ ಇಸ್ರೇಲ್ ಕ್ರಮಕ್ಕೆ ಸೌದಿ, ಕತಾರ್ ವಿರೋಧ - GOLAN HEIGHTS